ಬೆಂಗಳೂರು: ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗೆ ಬಂದ್ ಮಾಡಲಾಗಿದ್ದ ಬೋನ್ಸಾಯ್ ಗಾರ್ಡನ್ ಶೀಘ್ರದಲ್ಲೇ ಪುನರಾರಂಭವಾಗಲಿದೆ. ಎಲ್ಲಾವೂ ಅಂದುಕೊಂಡಂತೆ ನಡೆದರೆ ಜನವರಿಯಿಂದ ಮತ್ತೆ ಸಾರ್ವಜನಿಕರಿಗೆ ಉದ್ಯಾನ ಮುಕ್ತವಾಗಲಿದೆ.
ಗಣರಾಜ್ಯೋತ್ಸವದ ಹೊಸ್ತಿಲಲ್ಲಿ ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ ಅಧಿಕಾರಿಗಳು ಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದು, ಬೋನ್ಸಾಯ್ ಉದ್ಯಾನವನ್ನು ಪುನರಾರಂಭಿಸಲು ಮುಂದಾಗಿದ್ದಾರೆ. ಬೋನ್ಸಾಯ್ ಉದ್ಯಾನವನ್ನು ಎರಡು ವರ್ಷಗಳ ಕಾಲ ಸಾರ್ವಜನಿಕರಿಗೆ ಮುಚ್ಚಲಾಗಿತ್ತು. ಅನೇಕ ಸಸ್ಯಗಳು ಮೊದಲೇ ಹಾಳಾಗಿದ್ದವು.
ಇದಕ್ಕೆ ಹೊಸ ಭೂ ರಚನೆಯ ಅಗತ್ಯವಿತ್ತು. ಹೀಗಾಗಿ ಉಳಿದಿರುವ ಕೆಲವು ಮರಗಳನ್ನು ಪಕ್ಕಕ್ಕೆ ಇಟ್ಟು ಪೋಷಣೆಯೊಂದಿಗೆ ಕೆಲಸ ಪೂರ್ಣಗೊಳಿಸಲಾಗಿದೆ. ಮೂರು ಎಕರೆ ಪ್ರದೇಶದ ಬೋನ್ಸಾಯ್ ಗಾರ್ಡನ್ ನಲ್ಲಿ ಸುಮಾರು ಅರ್ಧ ಎಕರೆಯ ಉದ್ಯಾನವನ್ನು ಮೊದಲ ಹಂತದಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು, ಉಳಿದ ಗಾರ್ಡನ್ ನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್ ಹಿರಿಯ ಅಧಿಕಾರಿಗಳು ತಿಳಿಸಿದರು. ಇದಲ್ಲದೆ, ಪುಷ್ಪ ಪ್ರದರ್ಶನದ ಸ್ಥಳದಾದ್ಯಂತ 5 ಲಕ್ಷ ಕುಂಡಗಳು ಸೇರಿದಂತೆ 9 ಲಕ್ಷ ಗಿಡದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ವಿಷಯದ ಕುರಿತು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಅಧಿಕಾರಿಗಳು ಭೇಟಿ ಮಾಡಿ ನಿರ್ಧರಿಸಲಿದ್ದಾರೆ. ಗಣರಾಜ್ಯೋತ್ಸವದಂದು 10 ದಿನಗಳ ಫಲಪುಷ್ಪ ಪ್ರದರ್ಶನದ ಅಂಗವಾಗಿ ಗಾಜಿನ ಮನೆಯಲ್ಲಿ ಹುಲ್ಲು ಹಾಸುಗಳು ಮತ್ತು ಕುಂಡಗಳಲ್ಲಿ ವಿವಿಧ ಸಸ್ಯಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.