ಬೆಂಗಳೂರು: ಬೆಂಗಳೂರು ಮೆಟ್ರೋ ಜಾಲದಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಬರೋಬ್ಬರಿ 18.82 ಕಿಲೋ ಮೀಟರ್ ಉದ್ದದ ಹಳದಿ ಮೆಟ್ರೋ ಮಾರ್ಗದ ರೈಲು ಸಂಚಾರ, ವಾಣಿಜ್ಯ ಕಾರ್ಯಾಚರಣೆಗೆ ಅನುಮೋದನೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಅದರ ಪ್ರಾಥಮಿಕ ಹಂತವೆಂಬಂತೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಮತ್ತು ತಂಡದಿಂದ ತಪಾಸಣೆ ನಡೆದಿದೆ.
ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಂಡವು ಹಳದಿ ಮಾರ್ಗದಲ್ಲಿ ಸೋಮವಾರ ಫೆಬ್ರವರಿ 24ರಂದು ಆರ್.ವಿ. ರಸ್ತೆ – ಬೊಮ್ಮಸಂದ್ರ ನಿಲ್ದಾಣಗಳ ನಡುವೆ CRRC ನಿಂದ ಬಂದಿರುವ ಡ್ರೈವರ್ಲೆಸ್ ಮೆಟ್ರೋ ರೈಲುಗಳ ತಪಾಸಣೆ ನಡೆಸಿದರು. ಈ ತಪಾಸಣೆ ಹೊಸ ರೋಲಿಂಗ್ ಸ್ಟಾಕ್ / ರೈಲಿಗೆ ರೈಲ್ವೆ ಸಚಿವಾಲಯದ ಅನುಮೋದನೆ ಪಡೆಯುವ ಮೊದಲು ಹೆಜ್ಜೆಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.
ಅನುಮೋದನೆ ಪಡೆಯುವ ಪ್ರಕ್ರಿಯೆ ಹೇಗಿರುತ್ತೆ? ರೋಲಿಂಗ್ ಸ್ಟಾಕ್ / ರೈಲು ರೈಲ್ವೆ ಮಂಡಳಿಯ ಅನುಮೋದನೆ ಪಡೆದು ಈ ಮಾರ್ಗದ ಸಂಕೇತ ವ್ಯವಸ್ಥೆಯ ಪರೀಕ್ಷೆಗಳು ಪೂರ್ಣಗೊಳಿಸಬೇಕಿದೆ. ಅದರ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಂಡವನ್ನು ರೀಚ್ -5ರ ಹಳದಿ ಮಾರ್ಗದ ಸಂಪೂರ್ಣ ತಪಾಸಣೆಗೆ ಮತ್ತೆ ಆಹ್ವಾನಿಸಲಾಗುತ್ತದೆ. ಈ ತಪಾಸಣೆ ಯಶಸ್ವಿಯಾಗಿ ಮುಗಿದ ನಂತರ ಅನುಮೋದನೆ ಪಡೆಯಲಾಯಲಾಗುವುದು. ತದನಂತರ, ಈ ಮಾರ್ಗವನ್ನು ಸಾರ್ವಜನಿಕ ಕಾರ್ಯಾಚರಣೆಗೆ ತೆರೆಯಲಾಗುವುದು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಬೆಂಗಳೂರಿಗೆ ಎರಡನೇ ಡ್ರೈವರ್ಲೆಸ್ ರೈಲು ಬಂದಿದೆ. ಇದನ್ನು ವಿವಿಧ ಹಂತಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಇದು ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ವ್ಯವಸ್ಥೆ ಹೊಂದಿದೆ. ಡ್ರೈವರ್ ಲೆಸ್ ಆಗಿದ್ದರಿಂದ ಹೆಚ್ಚಿನ ಪರೀಕ್ಷೆಗಳು ನಡೆಯಲಿವೆ. ಸದ್ಯ ರೈಲು ಸಿಗ್ನಲಿಂಗ್ ವ್ಯವಸ್ಥೆ, ಪ್ರಾಯೋಗಿಕ ಸಂಚಾರ, ಸುರಕ್ಷತೆಯ ತಪಾಸಣೆ ನಡೆಸಲಾಗುತ್ತಿದೆ.
ಮಾರ್ಚ್ ಅಂತ್ಯಕ್ಕೆ ಮೂರನೇ ರೈಲು ಆಗಮನ ಇದು ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಅಷ್ಟರಲ್ಲಿ ಮಾರ್ಚ್ ಅಂತ್ಯಕ್ಕೆ ಮತ್ತೊಂದು ಡ್ರೈವರ್ಲೆಸ್ ರೈಲು ಬರುವ ಸಾಧ್ಯತೆ ಇದೆ. ಮೂರನೇ ರೈಲು ಬರುವ ಹೊತ್ತಿಗೆ ಎರಡನೇ ರೈಲು ಸಂಚಾರ, ಸಾರ್ವಜನಿಕ ಕಾರ್ಯಾಚರಣೆಗೆ ಅನುಮೋದನೆ ಪಡೆಯುವ ಹಂತಕ್ಕೆ ಹೋಗಿರುತ್ತೇವೆ. ಬರುವ ಹೊಸ ರೈಲುಗಳ ಸಹ ಸಿಬಿಟಿಸಿ ವ್ಯವಸ್ಥೆ ಹೊಂದಿವೆ. ಹೀಗಾಗಿ ಅವುಗಳು ಅಗತ್ಯ ಎಲ್ಲ ಪರೀಕ್ಷೆಗಳಿಗೆ ಒಳಗಾಗಲಿವೆ.
ಇದು ಪ್ರಮುಖ ಇ-ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ಅನೇಕ ಉದ್ಯೋಗಿಗಳು, ಸಾರ್ವಜನಿಕರು ಇದ್ದು, ಲಕ್ಷಾಂತರ ಮಂದಿಯು ಈ ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರ ವರೆಗಿನ ಮಾರ್ಗ ತೆರೆಯುವುದನ್ನೇ ಕಾಯುತ್ತಿದ್ದಾರೆ. ಮೆಟ್ರೋ ದರ ಏರಿಕೆ ಮಧ್ಯೆಯು ಈ ಮಾರ್ಗ ತೆರೆದರೆ ಲಕ್ಷಾಂತರ ಜನರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.