ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಜನರ ಜೀವನಾಡಿಯಾಗಿ ಬದಲಾಗುತ್ತಿರುವ ನಮ್ಮ ಮೆಟ್ರೋ ದರ ಏರಿಕೆಗೆ ಮುಂದಾಗಿದೆ. ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಬಳಿಕ ನಗರದ ಜನರು ನಮ್ಮ ಮೆಟ್ರೋ ಪ್ರಯಾಣ ದರ ಏರಿಕಗೆ ಸಿದ್ಧರಾಗಬೇಕಿದೆ. ಕಳೆದ ವಾರವೇ ಹೊಸ ದರ ಘೋಷಣೆಯಾಗಲಿದೆ ಎಂಬ ಮಾಹಿತಿ ಇತ್ತು. ಆದರೆ ಈ ತೀರ್ಮಾನವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ.
ಬಿಎಂಆರ್ಸಿಎಲ್ ರಚನೆ ಮಾಡಿದ್ದ ಸಮಿತಿ ನಮ್ಮ ಮೆಟ್ರೋ ಪ್ರಯಾಣ ದರವನ್ನುಶೇ 40ರಷ್ಟು ಏರಿಕೆ ಮಾಡಲು ಶಿಫಾರಸು ಮಾಡಿದೆ. ಈ ವರದಿಗೆ ಬಿಎಂಆರ್ಸಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆಯೂ ಸಿಕ್ಕಿದೆ. ಆದರೆ ದರ ಏರಿಕೆ ಕುರಿತು ಅಧಿಕೃತ ಘೋಷಣೆ ಬಾಕಿ ಇದೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಸದ್ಯ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಬಿಜೆಪಿಯ ಹಲವು ನಾಯಕರು ದರ ಏರಿಕೆಯನ್ನು ವಿರೋಧಿಸುತ್ತಿದ್ದಾರೆ. ಸದ್ಯಕ್ಕೆ ದರ ಏರಿಕೆಗೆ ತಾತ್ಕಾಲಿಕ ತಡೆ ಇದೆ. ಈ ನಡುವೆ ಕೇಂದ್ರ ಸರ್ಕಾರ ಈ ಕುರಿತು ವರದಿಯನ್ನು ಕೇಳಿದೆ.
ವರದಿ ಕೇಳಿದ ಕೇಂದ್ರ ಸರ್ಕಾರ: ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ಸೇರಿದಂತೆ ಹಲವು ನಾಯಕರು ನಮ್ಮ ಮೆಟ್ರೋ ದರ ಏರಿಕೆಯನ್ನು ವಿರೋಧಿಸಿದ್ದರು. ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಿ, ಘೋಷಣೆ ಮಾಡಿರುವ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ ಮಾಡಿ, ಪ್ರಯಾಣ ದರ ರಹಿತವಾದ ಆದಾಯ ಸಂಗ್ರಹಣೆಗೆ ಗಮನ ಕೊಡಿ ಎಂದು ಸಲಹೆ ನೀಡಿದ್ದರು.
ಈಗ ಕೇಂದ್ರ ಸರ್ಕಾರ ನಮ್ಮ ಮೆಟ್ರೋ ಪ್ರಯಾಣ ದರ ನಿಗದಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಎಂದು ಬಿಎಂಆರ್ಸಿಎಲ್ಗೆ ಸೂಚನೆ ನೀಡಿದೆ. ದರ ನಿಗದಿ ಮಾನದಂಡಗಳ ಅಧ್ಯಯನಕ್ಕಾಗಿ ವಿವರವನ್ನು ಕೇಂದ್ರ ಸರ್ಕಾರ ಕೇಳಿದೆ, ಅದನ್ನು ನಾವು ನೀಡಲಿದ್ದೇವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ ಟಿಕೆಟ್ ದರವನ್ನು ಶೇ 40 ರಿಂದ 45ರಷ್ಟು ಏರಿಕೆ ಮಾಡಲು ದರ ನಿಗದಿ ಸಮಿತಿ ಶಿಫಾಸರಸು ಮಾಡಿದೆ. ಈ ಬಗ್ಗೆ ಬಿಎಂಆರ್ಸಿಎಲ್ ಆಡಳಿತ ಮಂಡಳಿ ಸಭೆಯಲ್ಲಿಯೂ ಚರ್ಚಿಸಲಾಗಿದೆ. ದರ ಪರಿಷ್ಕರಣೆ ಬಗ್ಗೆ ಎರಡು ದಿನದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ವಿವರವನ್ನು ಮಾತ್ರ ಕೇಳಿದ್ದು, ದರ ಪರಿಷ್ಕರಣೆ ತಡೆ ಹಿಡಿಯುವ ಕುರಿತು ಯಾವುದೇ ಸೂಚನೆ ನೀಡಿಲ್ಲ. ಆದ್ದರಿಂದ ಫೆಬ್ರವರಿ 1ರಿಂದ ನೂತನ ದರ ಜಾರಿಗೆ ಬರುವ ನಿರೀಕ್ಷೆ ಇದೆ. ಅಧಿಕಾರಿಗಳು ಈ ಕುರಿತು ಶೀಘ್ರವೇ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುವ ನಿರೀಕ್ಷೆ ಇದೆ.