ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಮಾಣಿಕ್ಯ ಚಿತ್ರ ನಿರ್ಮಾಪಕ ಎಂ.ಎನ್. ಕುಮಾರ್ ಅವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.

ನಟರೊಬ್ಬರಿಂದ ಸಾಲ ಪಡೆದುಕೊಂಡಿದ್ದ ಕುಮಾರ್ ಅವರು ಹಣವನ್ನು ವಾಪಸ್ ನೀಡಿರಲಿಲ್ಲ. ಕುಮಾರ್ ಅವರು ನೀಡಿದ್ದ ಚೆಕ್ ಸಹ ಬೌನ್ಸ್ ಆಗಿತ್ತು. ಕುಮಾರ್ ಅವರ ವಿರುದ್ಧ 4ನೇ ಎಸಿಎಂಎಂ ಕೋರ್ಟ್ನಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕುಮಾರ್ಗೆ ಶಿಕ್ಷೆ ವಿಧಿಸಿ ಬಂಧನದ ವಾರಂಟ್ ಹೊರಡಿಸಿತ್ತು. ಕುಮಾರ್ ಅವರ ಕಚೇರಿ ಗಾಂಧಿನಗರದಲ್ಲಿ ಇದ್ದ ಕಾರಣ ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ಕೋರ್ಟ್ನಿಂದ ವಾರೆಂಟ್ ಜಾರಿ ಮಾಡಲು ನ್ಯಾಯಾಲಯ ಆದೇಶಿಸಿತ್ತು.
ಇದೀಗ ಕುಮಾರ್ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧನಕ್ಕೊಳಗಾಗಿರುವ ಕುಮಾರ್ ಅವರು, ‘ರನ್ನ’, ‘ಮಾಣಿಕ್ಯ’, ‘ಮುಕುಂದ ಮುರಾರಿ’, ‘ಅಂಜನಿಪುತ್ರ’ ಸೇರಿದಂತೆ ಹಲವು ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ.