ಬೆಂಗಳೂರು : ಹೋಳಿ ಆಚರಿಸುವಾಗ ಸ್ಥಳೀಯರ ಮೇಲೆ ಹಲ್ಲೆಗೈದಿದ್ದ ನೇಪಾಳ ಮೂಲದವರು ಸೇರಿ ಮೂವರು ಆರೋಪಿಗಳನ್ನ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಮೇಶ್, ರಾಜೇಶ್ ಹಾಗೂ ಉಮೇಶ್ ಬಂಧಿತರು. ಮಾರ್ಚ್ 14ರಂದು ಲಾಲ್ಬಾಗ್ನಲ್ಲಿ ಶುಕ್ರವಾರ ಸಂಜೆ ನಡೆದಿದ್ದ ಗಲಾಟೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಘಟನೆ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸಿದ್ದಾಪುರ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮಾರ್ಚ್ 14 ರಂದು ಸಂಜೆ 4.30ರ ಸುಮಾರಿಗೆ ಲಾಲ್ಬಾಗ್ನಲ್ಲಿ ನೇಪಾಳಿ ಯುವಕರು ಹೋಳಿ ಹಬ್ಬ ಆಚರಿಸುತ್ತಿದ್ದರು. ಇದ್ದಕ್ಕಿದ್ದಂತೆ ಯುವಕರ ನಡುವೆ ಗಲಾಟೆಯಾಗಿದೆ. ಈ ಬಗ್ಗೆ ಅಲ್ಲಿಯೇ ಇದ್ದ ಸ್ಥಳೀಯ ಅಂಗಡಿ ಮಾಲಿಕ ಪ್ರಶ್ನಿಸಿದ್ದಾರೆ. ತಕ್ಷಣ ಆರೋಪಿಗಳು ಅಂಗಡಿ ಮಾಲಿಕನ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಅಂಗಡಿ ಮಾಲಿಕನ ತಲೆಗೆ ಗಂಭೀರ ಗಾಯಗಳಾಗಿವೆ.