ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಯಲೆಯಲ್ಲಿ 15ನೇ ಆವೃತ್ತಿಯ ಏರೋ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಏರೋ ಇಂಡಿಯಾ 2025ರ ಫೆಬ್ರವರಿ 10 ರಿಂದ 14ರ ತನಕ ನಡೆಯಲಿದ್ದು, ರಕ್ಷಣಾ ಮತ್ತು ವಾಯುಯಾನ ಕ್ಷೇತ್ರದಲ್ಲಿ ಕಾರ್ಯತಂತ್ರ, ಪಾಲುದಾರಿಕೆಗಳನ್ನು ರೂಪಿಸಲು ಇದು ಒಂದು ವೇದಿಕೆಯಾಗಿದೆ.
ಏರೋ ಇಂಡಿಯಾ-2025 ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ಇದಕ್ಕಾಗಿಯೇ ಭಾನುವಾರ ಸಂಜೆಯೇ ಅವರು ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಆದರೆ ಉದ್ಘಾಟನಾ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರ ಉಳಿಯಲಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ವೈದ್ಯರ ಸಲಹೆಯಂತೆ ವಿಶ್ರಾಂತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವಾರದಿಂದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಕಳೆದ ಭಾನುವಾರ ಅವರಿಗೆ ಕಾಲು ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ವೈದ್ಯರ ಸಲಹೆಯಂತೆ ಸಂಚಾರವನ್ನು ನಡೆಸದೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಒಂದು ವಾರದಿಂದ ಯಾವುದೇ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿಲ್ಲ. ಆದರೆ ಅವರು ಗೃಹ ಕಛೇರಿಯಲ್ಲಿ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಮಾರ್ಚ್ನಲ್ಲಿ ಬಜೆಟ್ ಮಂಡನೆ ತಯಾರಿ ನಡೆಸಿರುವ ಅವರು ಸಭೆಗಳಲ್ಲಿ ಬ್ಯುಸಿಯಾಗಿದ್ದಾರೆ.
ಏರೋ ಇಂಡಿಯಾ ಉದ್ಘಾಟನೆ ಕಾರ್ಯಕ್ರಕ್ಕೂ ಮೊದಲು ನಗರದ ಖಾಸಗಿ ಹೋಟೆಲ್ನಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ರಕ್ಷಣಾ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಆದರೆ ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಬ್ಬರೇ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಏರೋ ಇಂಡಿಯಾ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಸಹ ಪಾಲ್ಗೊಂಡಿಲ್ಲ. ಏರೋ ಇಂಡಿಯಾ-2025ರಲ್ಲಿ 33 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸ್ಪೇನ್ನ ಏರ್ಬಸ್ ಡಿಫೆನ್ಸ್ ಮತ್ತು ಸ್ಪೇಸ್, ಯುಕೆಯ ಕಾಲಿನ್ಸ್ ಏರೋಸ್ಪೇಸ್, ಜಿಇ ಏರೋಸ್ಪೇಸ್, ಮಾರ್ಟಿನ್-ಬೇಕರ್, ಎಂಬಿಡಿಎ ಮತ್ತು ರೋಲ್ಸ್ ರಾಯ್ಸ್, ಇಸ್ರೇಲ್ನ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಸಫ್ರಾನ್, ಫ್ರಾನ್ಸ್ನ ಪ್ರಮುಖ ವಿದೇಶಿ ಕಂಪನಿಗಳ ಪ್ರತಿನಿಧಿಗಳು ಈಗಾಗಲೇ ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಏರೋ ಇಂಡಿಯಾ ವಾಯುಯಾನ ಮತ್ತು ರಕ್ಷಣಾ ತಂತ್ರಜ್ಞಾನಗಳ ಭವಿಷ್ಯವನ್ನು ಮುನ್ನಡೆಸುವ ಹೊಸ ಸಂಶೋಧನೆ, ಅವಕಾಶಗಳನ್ನು ಅನ್ವೇಷಿಸಲು ಮತ್ತು ಪಾಲುದಾರಿಕೆಗಳನ್ನು ರೂಪಿಸಿಕೊಳ್ಳಲು ಒಂದು ವೇದಿಕೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ರಕ್ಷಣೆ ಮತ್ತು ವಾಯುಯಾನ ಕ್ಷೇತ್ರದ ವಿವಿಧ ಕಂಪನಿಗಳು ಪಾಲ್ಗೊಳ್ಳುತ್ತಿದ್ದು, ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ತಂತ್ರಜ್ಞಾನದ ಅನಾವರಣ ಆಗಲಿದೆ ಎಂದು ಅಂದಾಜಿಸಲಾಗಿದೆ. ಭೂಮಿಯಾಚೆಗೆ ಮಾನವ ಕಾರ್ಯಾಚರಣೆಗಳನ್ನು ಮುನ್ನಡೆಸುವ ಹೊಸ ಹೊಸ ತಂತ್ರಜ್ಞಾನಗಳ ಪರಿಚಯವಾಗಲಿದೆ. ಏರೋ ಇಂಡಿಯಾ-2025ರ ಉದ್ಘಾಟನೆ ಬಳಿಕ ವಿವಿಧ ತಂಡಗಳ ವೈಮಾನಿಕ ಪ್ರದರ್ಶನ ನಡೆಯಲಿದೆ. ಆ ಬಳಿಕ ಗೋಷ್ಠಿಗಳು, ವ್ಯಾಪಾರ ಒಪ್ಪಂದಗಳ ಕುರಿತು ಮಾತುಕತೆಗಳು ನಡೆಯಲಿವೆ. ಏರೋ ಇಂಡಿಯಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಯಲಹಂಕ, ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಲಿದೆ.
