ಬೆಂಗಳೂರು: ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕೇಕ್ ತಯಾರಿಕೆಗೆ ಬಳಸಲಾಗುವ ಸುಗಂಧದ್ರವ್ಯ (ಎಸೆನ್ಸ್) ಸೇವಿಸಿ ಮೂವರು ಸಜಾ ಕೈದಿಗಳು ಸಾವನ್ನಪ್ಪಿರುವ ಪ್ರಕರಣವನ್ನು ಕಾರಾಗೃಹ ಹಾಗೂ ಸುಧಾರಣಾ ಸೇವಾ ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಿರಲು ರಾಜ್ಯದ ಎಲ್ಲಾ ಜೈಲುಗಳಿಗೆ ನಿರ್ದೇಶನ ನೀಡಿದೆ.
ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಬೆಳಗಾವಿ ಸೇರಿದಂತೆ ಇತರ ರಾಜ್ಯ ಹಾಗೂ ಜಿಲ್ಲಾ ಕಾರಾಗೃಹಗಳ ಅಧೀಕ್ಷಕರಿಗೆ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ನಿರ್ದೇಶನ ನೀಡಿದ್ದಾರೆ.
ನಿಗಾ ವಹಿಸುವಂತೆ ಸೂಚನೆ: ಕಾರಾಗೃಹದಲ್ಲಿನ ಬೇಕರಿ ವಿಭಾಗದಲ್ಲಿ ಕೇಕ್ ತಯಾರಿಸಲು ಎಸೆನ್ಸ್ ಬಳಕೆ ಮಾಡಲಾಗುತ್ತಿದೆ. ಕೇಕ್ ತಯಾರಿಸುವ ಕೈದಿಗಳ ಬಗ್ಗೆ ಎಚ್ಚರ ವಹಿಸಬೇಕು. ನಿಗದಿತ ಕೈದಿಗಳನ್ನ ಹೊರತುಪಡಿಸಿದರೆ ವಿವಿಧ ಜವಾಬ್ದಾರಿ ವಹಿಸಿಕೊಂಡಿರುವ ಹಾಗೂ ವಿವಿಧ ಬ್ಯಾರಕ್ನಲ್ಲಿನ ಕೈದಿಗಳಿಗೆ ಪ್ರವೇಶ ನಿರ್ಬಂಧ ಕಠಿಣಗೊಳಿಸಬೇಕು. ಬೇಕರಿ ಉತ್ಪನ್ನದಲ್ಲಿ ತೊಡಗಿರುವ ಕೈದಿಗಳು ಕೆಲಸ ಸಮಯದಲ್ಲಿ ಮಾತ್ರ ಇರಬೇಕು. ಕೆಲಸ ಅವಧಿ ಮುಗಿದ ಬಳಿಕ ವಿಭಾಗಕ್ಕೆ ಯಾರು ಹೋಗದಿರಲು ನಿಗಾ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಕೇಕ್ ಹಾಗೂ ಇನ್ನಿತರ ಬೇಕರಿ ಉತ್ಪನ್ನಗಳಿಗೆ ಬಳಸಲಾಗುವ ಎಸೆನ್ಸ್ ಸೇರಿದಂತೆ ವಿವಿಧ ರಾಸಾಯನಿಕ ವಸ್ತುಗಳ ಸರಬರಾಜು ಮಾಡುವ ಕಂಪನಿಗಳ ಜೊತೆ ಮಾತುಕತೆ ನಡೆಸಿ, ಇದರ ಅಡ್ಡ ಪರಿಣಾಮಗಳನ್ನು ಅರಿತು ಇದರ ಬಗ್ಗೆ ಕೈದಿಗಳಿಗೆ ಎಚ್ಚರ ವಹಿಸುವಂತೆ ನಿರ್ದೇಶನ ನೀಡುವಂತೆ ತಿಳಿಸಲಾಗಿದೆ.
ಘಟನೆ ವಿವರ: ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷಾಬಂಧಿಯಾಗಿದ್ದ ಮಾದೇಶ, ನಾಗರಾಜ್ ಹಾಗೂ ರಮೇಶ್ ಎಂಬವರು ಮೈಸೂರು ಕಾರಾಗೃಹದ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಡಿ.24ರಂದು ಕೇಕ್ ತಯಾರಿಸುತ್ತಿದ್ದಾಗ ರಾಸಾಯನಿಕವೊಂದನ್ನು ಕೇಕ್ ಜೊತೆ ಬೆರೆಸಿ ಸೇವಿಸಿದ್ದರು. ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಎಲ್ಲರನ್ನೂ ಮೈಸೂರಿನ ಕೆ.ಆರ್.ಆಸ್ಪತ್ರೆಯ ಜೈಲು ವಾರ್ಡ್ಗೆ ಸೇರಿಸಲಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದರು. ಎಸೆನ್ಸ್ ಮಾದರಿಯನ್ನು ಎಫ್ಎಸ್ಎಲ್ಗೆ ರವಾನಿಸಲಾಗಿದ್ದು, ಈ ಸಂಬಂಧ ಬಂಧಿಖಾನೆ ಇಲಾಖೆಯ ಡಿಐಜಿ ಕೆ.ಸಿ.ದಿವ್ಯಶ್ರೀ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಸದ್ಯ ಈ ಬಗ್ಗೆ ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.