ಬೆಂಗಳೂರು: ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಜೆಟ್ ಮಂಡನೆಯಾಗಿದೆ. ಬರೋಬ್ಬರಿ 19,930 ಕೋಟಿ ರೂಪಾಯಿ ಮೊತ್ತದ ಬಜೆಟ್ ಅನ್ನು ಮಂಡಿಸಲಾಗಿದೆ. ಇದರಲ್ಲಿ ಬೆಂಗಳೂರು ನಗರಕ್ಕಾಗಿ ಏನೆಲ್ಲ ಹೊಸ ಹೊಸ ಯೋಜನೆಗಳು ಘೋಷಣೆಯಾಗಿವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಮುಂದಕ್ಕೆ ಕೊಂಡೊಯ್ಯುವ, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಹಾಗೂ ಸಮಗ್ರ ಅಭಿವೃದ್ಧಿಗೆ ಬಿಬಿಎಂಪಿ ಬಜೆಟ್ ಪೂರಕವಾಗಿದೆ ಎಂದು ಹೇಳಿದ್ದಾರೆ.

ಸುಮಾರು 19,930 ಕೋಟಿ ರೂಪಾಯಿ ಮೊತ್ತದ ಬಜೆಟ್ ಮೂಲಕ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಕಲ್ಪ ಮಾಡಿದ್ದು, ಬೆಂಗಳೂರನ್ನು ಅಭಿವೃದ್ಧಿಯ ಹಾದಿಗೆ ಮರಳಿ ತಂದು ಈ ಮೂಲಕ ಜಾಗತಿಕ ಮಟ್ಟದ ಮೂಲಸೌಕರ್ಯ ಒದಗಿಸಲು ಬದ್ಧರಾಗಿದ್ದೇವೆ. ಪಾಲಿಕೆ ಬಜೆಟ್ ಬೆಂಗಳೂರಿನ ಪ್ರಗತಿಯ ನೀಲನಕ್ಷೆಯಾಗಿದೆ ಎಂದು ಡಿಕೆ ಶಿವಕುಮಾರ್ ಶ್ಲಾಘಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಸುಗಮ ಸಂಚಾರಕ್ಕೆ ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್, 300 ಕಿ.ಮೀ ಬಫರ್ ವಲಯ ರಸ್ತೆ, ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ವೈಟ್ ಟ್ಯಾಪಿಂಗ್, ಸ್ಕೈಡೆಕ್, ನಗರದ ಸೌಂದರ್ಯ ಹೆಚ್ಚಳಕ್ಕೆ ದೀಪಾಲಂಕಾರ ಯೋಜನೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಬೆಂಗಳೂರಿನ ಸ್ವರೂಪವನ್ನೇ ಬದಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಮತ್ತು ನಾಗರೀಕರಿಬ್ಬರಿಗೂ ಪ್ರಯೋಜನವಾಗುವಂತಹ ಒಂದು ಬಾರಿ ಪರಿಹಾರ ಯೋಜನೆಯನ್ನು (ಓಟಿಎಸ್) ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರ ಪರಿಣಾಮ ಸುಮಾರು 3 ಲಕ್ಷ ಆಸ್ತಿಗಳಿಂದ 1,277 ಕೋಟಿ ಬಾಕಿ ವಸೂಲಿಯಾಗಿದೆ. ಪಾಲಿಕೆಯು ತನ್ನ ಎಲ್ಲಾ 25 ಲಕ್ಷ ಕಾಗದ ರೂಪದ ಖಾತಾಗಳನ್ನು ಆನ್ಲೈನ್ನಲ್ಲಿ ಡಿಜಿಟಲೀಕರಣಗೊಳಿಸುವ ಮೂಲಕ ಸಂಪರ್ಕ ರಹಿತ ಇ-ಖಾತಾ ವ್ಯವಸ್ಥೆ ಜಾರಿ ತಂದಿದೆ. ಇದು ಭಾರತದ ಅತಿ ದೊಡ್ಡ ಡಿಜಿಟಲ್ ಇ-ಖಾತಾ ವ್ಯವಸ್ಥೆ ಎಂದು ಕಾಂಗ್ರೆಸ್ ಹೇಳಿದೆ.
ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರು ಬಜೆಟ್ ಮಂಡಿಸಿದರು. ಬಜೆಟ್ನ ಬಹುಪಾಲು ಭಾಗ ಸುಮಾರು ಶೇ 65ರಷ್ಟು ಪಾಲನ್ನು ಅಭಿವೃದ್ಧಿ ಕೆಲಸಗಳಿಗೆ ಮೀಸಲಿಡಲಾಗಿದೆ ಎಂದು ಹೇಳಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಸುಮಾರು 2000 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಕಾಲುವೆಗಳಿಗೆ 174 ಕಿ.ಮೀ. ಉದ್ದದ ತಡೆಗೋಡೆ ನಿರ್ಮಾಣಕ್ಕೆ ಬಜೆಟ್ನಲ್ಲಿ ಘೋಷಣೆಯಾಗಿದೆ.
ಇನ್ನು ಸ್ಕೈ-ಡೆಕ್ ನಿರ್ಮಾಣಕ್ಕಾಗಿ 50 ಕೋಟಿ ರೂಪಾಯಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆರವಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈ ಸಾಲಿನಲ್ಲಿ 247.25 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ನಗರ ವ್ಯಾಪ್ತಿಯ ಕೊಳವೆಬಾವಿಗಳು, ಶುದ್ಧಕುಡಿಯುವ ನೀರಿನ ಘಟಕಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ. ಪಾಲಿಕೆಯ ಆರು ವಲಯಗಳಲ್ಲಿ ಪಶುವೈದ್ಯಕೀಯ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇನ್ನು 15ನೇ ಹಣಕಾಸು ಆಯೋಗದ ಅನುದಾನದಲ್ಲಿ 14 ಹೊಸ ಉದ್ಯಾನವನಗಳನ್ನು ಕೂಡ ಅಭಿವೃದ್ಧಿಪಡಿಸಲು ಮುಂದಾಗಿದೆ. 10 ಕೋಟಿ ವೆಚ್ಚದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನೆರವು, ಮಹಿಳೆಯರಿಗೆ ಜೀವನೋಪಾಯಕ್ಕಾಗಿ 1000 ಮಂದಿಗೆ ಹೊಲಿಗೆ ಯಂತ್ರ ವಿತರಣೆ, ನಿರಾಶ್ರಿತರಿಗೆ ರಾತ್ರಿ ತಂಗುದಾಣಗಳ ನಿರ್ವಹಣೆಗಾಗಿ 5 ಕೋಟಿ ಅನುದಾನ ಸೇರಿದಂತೆ, ಕಸ ಸಂಗ್ರಹಣೆ, ವಿಲೇವಾರಿ, ಸಂಸ್ಕರಣೆಗೆ ಕಮಾಂಡ್ ಕಂಟ್ರೋಲ್ ರೂಂ ಸ್ಥಾಪಿಸಲು ಉದ್ದೇಶಿಸಲಾಗಿದೆ.