ಬೆಂಗಳೂರು: ರಾಜ್ಯದಲ್ಲಿ ಆಸ್ತಿ ನೋಂದಣಿಯಲ್ಲಿ ಬಹುದೊಡ್ಡ ಸಮಸ್ಯೆ ಎದುರಾಗಿದ್ದು. ಆಸ್ತಿ ನೋಂದಣಿ ಮಾಡಿಕೊಳ್ಳುವುದಕ್ಕೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ನಿತ್ಯವೂ ಸಾವಿರಾರು ಆಸ್ತಿಗಳ ರಿಜಿಸ್ಟ್ರೇಷನ್ ನಡೆಯುತ್ತದೆ. ಆದರೆ ಕಳೆದ ಒಂದು ತಿಂಗಳಿನಿಂದಲೂ ಆಸ್ತಿ ನೋಂದಣಿಗೆ ಸಮಸ್ಯೆ ಆಗುತ್ತಿದೆ. ಕಾವೇರಿ ತಂತ್ರಾಂಶ 2.0ದಲ್ಲಿ ತಾಂತ್ರಿಕ ಸಮಸ್ಯೆ ಹಾಗೂ ಸರ್ವರ್ಡೌನ್ನಿಂದ ಆಸ್ತಿ ನೋಂದಣಿ ಮಾಡಿಕೊಳ್ಳುವುದಕ್ಕೆ ಸಮಸ್ಯೆ ಆಗಿದೆ. ಹೀಗಾಗಿ ಆಸ್ತಿ ನೋಂದಣಿ ಮಾಡುವುದಕ್ಕೆ ಈ ಹಿಂದಿನಂತೆಯೇ ಆರು ತಿಂಗಳ ಟೈಮ್ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಬೆಂಗಳೂರು ಬಿಲ್ಡರ್ಸ್ ಹಾಗೂ ಡೇವಲಪರ್ಸ್ ಅಸೋಸಿಯೇಷನ್ನಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಮಾಡಲಾಗಿದೆ.
ಕರ್ನಾಟಕದಲ್ಲಿ ಆಸ್ತಿಗಳ ನೋಂದಣಿ ಹಾಗೂ ಆಸ್ತಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಚರ್ಚೆಗಳು, ಬದಲಾವಣೆಗಳು ಆಗುತ್ತಿವೆ. ರಾಜ್ಯ ಸರ್ಕಾರವು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದಕ್ಕೆ ಹಾಗೂ ಆಸ್ತಿಗಳ ಮಾರಾಟದಲ್ಲಿ ಆಗುವ ಮೋಸವನ್ನು ತಪ್ಪಿಸುವ ಉದ್ದೇಶದಿಂದ ಆಸ್ತಿಗಳಿಗೆ ಕಡ್ಡಾಯ ಇ -ಖಾತಾ ಜಾರಿ ಮಾಡಿದೆ. ಆದರೆ, ಆಸ್ತಿಗಳ ನೋಂದಣಿ ಮತ್ತು ಇ – ಖಾತಾದಲ್ಲಿ ಭಾರೀ ಗೊಂದಲಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ, ಬೆಂಗಳೂರಿನಲ್ಲಿ ಇ – ಖಾತಾ ಆಗದೆ ಇರುವಂತಹ ಖಾಲಿ ನಿವೇಶನ, ಬಡಾವಣೆಗಳು, ವಿಲ್ಲಾ ಹಾಗೂ ಅಪಾರ್ಟ್ಮೆಂಟ್ಸ್ ಸೇರಿದಂತೆ ವಿವಿಧ ಆಸ್ತಿಗಳಿಗೆ ಮೊದಲಿನಂತೆಯೇ ಆಸ್ತಿ ನೋಂದಣಿ ಮಾಡಿಕೊಳ್ಳುವುದಕ್ಕೆ 6 ತಿಂಗಳು ಟೈಮ್ ಕೊಡಬೇಕು ಎಂದು ಮನವಿ ಮಾಡಲಾಗಿದೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಡಾವಣೆ ನಿರ್ಮಿಸುವುದಕ್ಕೆ ಹಾಗೂ ಅಪಾರ್ಟ್ಮೆಂಟ್ಸ್ಗಳನ್ನು ನಿರ್ಮಾಣ ಮಾಡುವುದಕ್ಕೆ ಇ-ಖಾತಾ ಕಡ್ಡಾಯ ಮಾಡಿ ಸರ್ಕಾರ ಹಾಗೂ ಬಿಬಿಎಂಪಿ ಆದೇಶ ಮಾಡಿದೆ. ಆದರೆ 2024ರ ಅಕ್ಟೋಬರ್ 31ರ ವರೆಗೆ ಮಾತ್ರ ಇ-ಖಾತಾ ಇಲ್ಲದ ಆಸ್ತಿಗಳಿಗೆ ಅವಕಾಶ ಕೊಡಲಾಗಿತ್ತು. ಕಡಿಮೆ ಸಮಯದಲ್ಲಿ ನೋಂದಣಿ ಸಾಧ್ಯವಾಗಿಲ್ಲ. ಹೀಗಾಗಿ ಇನ್ನಷ್ಟು ಕಾಲಾವಕಾಶ ಕೊಡಬೇಕು ಅಂತ ಮನವಿ ಮಾಡಲಾಗಿದೆ. ಬೆಂಗಳೂರು ಬಿಲ್ಡರ್ಸ್ ಹಾಗೂ ಡೇವಲಪರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ವೆಂಕಟಪ್ಪ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಸರ್ಕಾರ ಇಲ್ಲಿಯ ವರೆಗೆ ಯಾವುದೇ ಆದೇಶವನ್ನು ಮಾಡಿಲ್ಲ.
ಬಿಜೆಪಿಯಿಂದಲೂ ಟೀಕೆ: ರಾಜ್ಯದಲ್ಲಿ ಆಸ್ತಿ ನೋಂದಣಿ ಬಹುತೇಕ ಸ್ಥಗಿತವಾಗಿದೆ ಎಂದು ಬಿಜೆಪಿ ಸಹ ಟೀಕೆ ಮಾಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ದುರ್ಭಿಕ್ಷದಲ್ಲಿ ಅಧಿಕ ಮಾಸ ಎನ್ನುವಂತೆ ಈಗಾಗಲೇ ಈ ವರ್ಷದ ತೆರಿಗೆ ಸಂಗ್ರಹ ಶೇ.35% ಕುಸಿದಿದೆ. ಇದೀಗ ರಾಜ್ಯದಲ್ಲಿ ಆಸ್ತಿ ನೊಂದಣಿ ಬಹುತೇಕ ಸ್ತಬ್ಧವಾಗಿದೆ. ತೆರಿಗೆ ಸಂಗ್ರಹ ಗುರಿ ಮುಟ್ಟುವುದು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
2024-25 ನೇ ಸಾಲಿನಲ್ಲಿ ಬಜೆಟ್ ಗುರಿ ಪ್ರಕಾರ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 26,000 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಬೇಕಿತ್ತು. ಅಂದರೆ ಮಾಸಿಕವಾಗಿ ಸರಾಸರಿ 2,167 ಕೋಟಿ ರೂಪಾಯಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ಸಂಗ್ರಹವಾಗಬೇಕು. ಆದರೆ ಸರ್ವರ್ ಸಮಸ್ಯೆ, ಕಾವೇರಿ ತಂತ್ರಾಂಶ ಸಮಸ್ಯೆಯಿಂದ ಪ್ರತಿನಿತ್ಯ 8,000 ರಿಜಿಸ್ಟ್ರೇಷನ್ ಆಗುತ್ತಿದ್ದ ಕಡೆ ಈಗ ಕೇವಲ 200 ರಿಜಿಸ್ಟ್ರೇಷನ್ ಆಗುತ್ತಿದೆ. ಡಿಸೆಂಬರ್ ವರೆಗೆ ಕೇವಲ 75% ಗುರಿ ಮುಟ್ಟಲಾಗಿದೆ. ಇನ್ನೂ 9,000 ಕೋಟಿಯಷ್ಟು ಸಂಗ್ರಹವಾಗಬೇಕಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಈ ವರ್ಷ ದೊಡ್ಡ ಮೊತ್ತದ ಆದಾಯ ಕೊರತೆ ಎದುರಿಸಬೇಕಾಗುವುದು ಖಚಿತ ಎಂದು ಹೇಳಿದ್ದಾರೆ.