ಬೆಂಗಳೂರು: ಬೆಂಗಳೂರು ನಗರದಲ್ಲಿ ಬೇಸಿಗೆಯ ಜೊತೆ ಬಿಸಿ ಬಿಸಿ ಫಿಲ್ಟರ್ ಕಾಫಿಯೂ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಹೋಟೆಲ್ ಹೊಕ್ಕು ಕಾಫಿ ಹೀರುವ ಮುನ್ನ ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳಿ. ನಗರದ ಹೋಟೆಲ್ ಮಾಲೀಕರ ಒತ್ತಾಯ ಈಗ ಜಾರಿಗೆ ಬಂದಿದ್ದು, ಫಿಲ್ಟರ್ ಕಾಫಿ ದರದಲ್ಲಿ ಏರಿಕೆಯಾಗಿದೆ. ಮಾರ್ಚ್ ಮೊದಲ ವಾರದಲ್ಲಿಯೇ ನಗರದ ಹಲವು ಹೋಟೆಲ್, ದರ್ಶನಿಗಳಲ್ಲಿ ಕಾಫಿ ದರವನ್ನು ಏರಿಸಲಾಗಿದೆ.
ಈಗಾಗಲೇ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಕಾಫಿ ದರ ಏರಿಕೆಗೆ ಒಪ್ಪಿಗೆ ನೀಡಿತ್ತು. ನಗರದ ಹಲವು ಹೋಟೆಲ್ಗಳು ಇದನ್ನು ಜಾರಿಗೆ ತಂದಿದ್ದು, ಫಿಲ್ಟರ್ ಕಾಫಿ ದರ 20 ರೂ.ಗಳಿಗೆ ಏರಿಕೆಯಾಗಿದೆ. ಹೊಸ ದರದ ಬೋರ್ಡ್ ಹೋಟೆಲ್ಗಳಲ್ಲಿ ರಾರಾಜಿಸುತ್ತಿದೆ.
ಈ ಹಿಂದೆ ಕರ್ನಾಟಕ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿದಾಗ, ವಾಣಿಜ್ಯ ಬಳಕೆ ಸಿಲಿಂಡರ್ ದರದಲ್ಲಿ ಏರಿಕೆಯಾದಾಗ, ಫಿಲ್ಟರ್ ಕಾಫಿ/ ಟೀ ದರವನ್ನು ಏರಿಕೆ ಮಾಡಲು ಹೋಟೆಲ್ ಮಾಲೀಕರು ಬೇಡಿಕೆ ಇಟ್ಟಿದ್ದರು. ಈಗ ಕಾಫಿ ಪುಡಿ ದರದ ಭಾರೀ ಏರಿಕೆಯ ಹಿನ್ನಲೆಯಲ್ಲಿ ಹೋಟೆಲ್ಗಳ ಕಾಫಿ ದರವನ್ನು ಹೆಚ್ಚಿಸಲಾಗಿದೆ.
20 ರೂ. ಕಾಫಿ: ಉಡುಪಿ ಗ್ರಾಂಡ್, ಉಡುಪಿ ಕೈ ರುಚಿ, ಉಡುಪಿ ಫುಡ್ ಹಬ್ ಹೀಗೆ ಉಡುಪಿ ಹೆಸರಿನ ಹೋಟೆಲ್ಗಳಲ್ಲಿ ನಗರದಲ್ಲಿ ಕಾಫಿ, ಟೀ ದರವನ್ನು ಏರಿಕೆ ಮಾಡಲಾಗಿದೆ. ಕಾಫಿ ದರ ರೂ. 20, ಟೀ ದರ ರೂ. 15 ಆಗಿದೆ. ಆದ್ದರಿಂದ ಸ್ನೇಹಿತರ ಜೊತೆ ಮಾತನಾಡುತ್ತಾ ಕಾಫಿ ಕುಡಿಯಲು ಹೋಗುವ ಮುನ್ನ ಒಮ್ಮೆ ಆಲೋಚಿಸಿ.
ಫೆಬ್ರವರಿ ಕೊನೆಯ ವಾರದಲ್ಲಿಯೇ ಫಿಲ್ಟರ್ ಕಾಫಿ ದರವನ್ನು 5 ರೂ. ಹೆಚ್ಚಳ ಮಾಡಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಅನುಮತಿ ನೀಡಿತ್ತು. ನಗರದ ಹಲವು ಹೋಟೆಲ್, ದರ್ಶಿನಿಗಳು ಮಾರ್ಚ್ 1ರಿಂದಲೇ ಹೊಸ ದರವನ್ನು ಜಾರಿಗೊಳಿಸಿವೆ. ಈ ಕುರಿತು ಹೋಟೆಲ್ಗಳಲ್ಲಿ ಬೋರ್ಟ್ ಹಾಕಿವೆ. “ಹೋಟೆಲ್, ದರ್ಶನಿಗಳಲ್ಲಿ 15 ರೂ. ಇದ್ದ ದರ 20 ರೂ.ಗೆ ಏರಿಕೆಯಾಗಿದೆ. ಕಾಫಿ ಪುಡಿಯ ದರ ಏರಿಕೆ ಹಿನ್ನಲೆಯಲ್ಲಿ ದರವನ್ನು ಹೆಚ್ಚಳ ಮಾಡಲಾಗಿದೆ. ನಷ್ಟ ತಪ್ಪಿಸಲು ಇದು ಅನಿವಾರ್ಯವಾಗಿದೆ” ಎಂದು ಕೋರಮಂಗಲದ ಉಡುಪಿ ಹೋಟೆಲ್ ಕಾಫಿ ಕೌಂಟರ್ನಲ್ಲಿ ಕುಳಿತಿದ್ದ ಕುಂದಾಪುರದ ವಾಸಣ್ಣ ಹೇಳಿದರು. ವಾಸಣ್ಣ ಹೇಳುವಂತೆ ಕಾಫು ಪುಡಿಯ ದರದಲ್ಲಿ 2024ರಿಂದ ನಿರಂತರ ಏರಿಕೆಯಾಗುತ್ತಿದೆ. “2024ರ ಆರಂಭದಲ್ಲಿ 1 ಕೆಜಿ ಕಾಫಿ ಪುಡಿ ದರ 450 ರೂ. ತನಕ ಇತ್ತು. ಈಗ 600 ರಿಂದ 880 ರೂ. ತನಕ ಬಂದು ತಲುಪಿದೆ. ಆದ್ದರಿಂದ ಹೋಟೆಲ್ ಮಾಲೀಕರಿಗೆ ನಷ್ಟವಾಗುತ್ತಿದ್ದು, ಕಾಫಿ ದರ ಏರಿಕೆ ಅನಿವಾರ್ಯವಾಗಿತ್ತು”.
ಹಾಲಿನ ದರ ಏರಿಕೆ, ನಿರ್ವಹಣೆ ವೆಚ್ಚ, ಕಾರ್ಮಿಕರ ವೇತನ, ವಿದ್ಯುತ್ ಬಿಲ್, ನೀರಿನ ಬಿಲ್, ಕಾಫಿ ಪುಡಿಯ ದರ ಎಲ್ಲವೂ ಸೇರಿ ಹೋಟೆಲ್ಗಳಲ್ಲಿ ಕಾಫಿ ದರವನ್ನು ಏರಿಕೆ ಮಾಡಲಾಗಿದೆ. “ಕಾಫಿ ಪುಡಿಯ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮಾರ್ಚ್ ಮೊದಲ ವಾರದಲ್ಲಿ ಎಲ್ಲಾ ಹೋಟೆಲ್ಗಳಲ್ಲಿ ಕಾಫಿ ದರವನ್ನು ಶೇಕಡ 10 ರಿಂದ 15ರ ತನಕ ಏರಿಕೆ ಮಾಡಲಾಗುವುದು” ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಗೌರವ ಅಧ್ಯಕ್ಷ ಪಿ. ಸಿ. ರಾವ್ ಹೇಳಿದ್ದರು. ಅದು ಜಾರಿಯಾಗಿದೆ. “ಉತ್ತಮ ಗುಣಮಟ್ಟದ ಕಾಫಿ ಪುಡಿ ಬೇಕು ಎಂದರೆ ದರ ಹೆಚ್ಚು ನೀಡಬೇಕು. ಕಾಫಿ ಪುಡಿಯ ದರಗಳು ಏರಿಕೆಯಾಗುತ್ತಲೇ ಇದೆ. ಮುಂದಿನ ದಿನದಲ್ಲಿ ಹಾಲಿನ ದರ ಮತ್ತೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದ್ದರಿಂದ ಕಾಫಿ ದರ ಏರಿಕೆ ಅಗತ್ಯವಿತ್ತು” ಎಂದು ಅವರು ಹೇಳಿದ್ದಾರೆ.