ಬೆಂಗಳೂರು: ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಮ್ರೇಡ್ ಜಿ.ಸಿ ಬಯ್ಯಾರೆಡ್ಡಿ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅವರಿಗೆ ಉಸಿರಾಟ ಸಮಸ್ಯೆ ಬಳಲುತ್ತಿದ್ದರು, ಇತ್ತೀಚೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯ ವಿಚಾರಗಳ ಬಗ್ಗೆ ಕುಟುಂಬದ ಜೊತೆ ಚರ್ಚಿಸಲಾಗುವುದು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ ತಿಳಿಸಿದ್ದಾರೆ.
ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಅವರನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲ್ಲೂಕಿನ ಗಡಿಗವಾರಹಳ್ಳಿ ಗ್ರಾಮದ ಬಯ್ಯಾರೆಡ್ಡಿ ರಾಜ್ಯದಾದ್ಯಂತ ರೈತ, ಕಾರ್ಮಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಜನಪರ ಹೋರಾಟಗಳಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. 1999ರ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂನಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಸಹ ನಡೆಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಸಿಪಿಐ(ಎಂ) ನಾಯಕ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ ಅವರ ನಿಧನದದಿಂದ ದುಃಖಿತನಾಗಿದ್ದೇನೆ. ಆತ್ಮೀಯ ಸ್ನೇಹಿತರಾಗಿದ್ದ ಬಯ್ಯಾರೆಡ್ಡಿಯವರು ಭೇಟಿಯಾದಾಗೆಲ್ಲ ದೇಶದ ರೈತರು ಮತ್ತು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದರು. ಈ ಸಮುದಾಯಗಳಿಗೆ ನ್ಯಾಯ ಕೊಡಿಸಲು ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದ ಬಯ್ಯಾರೆಡ್ಡಿಯವರು ಒಬ್ಬ ದಣಿವರಿಯದೆ ಇದ್ದ ಜನಪರ ಹೋರಾಟಗಾರ. ಅವರ ಕುಟುಂಬ ವರ್ಗ ಮತ್ತು ಹಿತೈಷಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರು, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರೂ ಆಗಿದ್ದ ಶ್ರೀ ಜಿ.ಸಿ.ಬಯ್ಯಾರೆಡ್ಡಿ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ರಾಜ್ಯದಲ್ಲಿ ರೈತ, ಕಾರ್ಮಿಕ ಹೋರಾಟಗಳನ್ನು ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದ ಅವರು, ಅನೇಕ ಜನಪರ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನನ್ನೊಂದಿಗೂ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಅವರ ಅಗಲಿಕೆ ನನಗೆ ಬಹಳ ನೋವುಂಟು ಮಾಡಿದೆ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಪ್ರೊ.ಮುಝಾಫರ್ ಅಸ್ಸಾದಿ ಅವರ ನಿಧನದ ಕುರಿತು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ನಮ್ಮೆಲ್ಲರಿಗೆ ಪ್ರೀತಿಪಾತ್ರರಾಗಿದ್ದ ಹಿರಿಯ ವಿದ್ವಾಂಸ ಮತ್ತು ಸಾಮಾಜಿಕ ಚಿಂತಕ ಪ್ರೊ.ಮುಝಾಫರ್ ಅಸ್ಸಾದಿ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಪ್ರೊ.ಅಸ್ಸಾದಿ ಕೇವಲ ಒಬ್ಬ ಪ್ರಾಧ್ಯಾಪಕ ಆಗಿರಲಿಲ್ಲ. ನಾಡಿನ ಜನಪರ ಹೋರಾಟವನ್ನು ವೈಚಾರಿಕ ಚಿಂತನೆಯ ಮಾರ್ಗದರ್ಶನದೊಂದಿಗೆ ಮುನ್ನಡೆಸಿದವರು. ಅವರ ಅಗಲಿಕೆಯಿಂದ ನಾಡು ಬಡವಾಗಿದೆ, ಅವರ ಅಗಲಿಕೆಯಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕಷ್ಟ.
ನಿರಂತರವಾದ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿಯೂ ತಮ್ಮ ವಿದ್ವತ್ಪೂರ್ಣ ಬರವಣಿಗೆ ಮತ್ತು ಉಪನ್ಯಾಸಗಳ ಮೂಲಕ ಜನಪ್ರಿಯರಾಗಿದ್ದ ಪ್ರೊ.ಅಸ್ಸಾದಿ ಅವರು ಕನ್ನಡದ ಹೆಮ್ಮೆಯ ಪುತ್ರ. ವರ್ಷಗಳಿಂದ ನನ್ನ ಹಿತೈಷಿಯಾಗಿ ರಾಜಕೀಯವಾಗಿ ಸದಾ ನನ್ನ ಏಳಿಗೆಯನ್ನು ಹಾರೈಸುತ್ತಿದ್ದ ಪ್ರೊ.ಅಸ್ಸಾದಿ ಅವರ ಸಾವು ವೈಯಕ್ತಿಕವಾಗಿಯೂ ನನ್ನ ಪಾಲಿಗೆ ದೊಡ್ಡ ನಷ್ಟ. ಪ್ರೊ.ಅಸ್ಸಾದಿ ಅವರನ್ನು ಕಳೆದುಕೊಂಡ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.