ಬೆಂಗಳೂರು : ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ದಿನವೂ ಒಂದಿಲ್ಲೊಂದು ವಸ್ತುಗಳು ಹಾಗೂ ಸೇವೆಗಳ ಬೆಲೆ ಏರಿಕೆ ಮಾಡುವ ಮೂಲಕ ಶಾಕ್ ಕೊಡುತ್ತಿದ್ದರೆ. ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹ ಬೆಂಗಳೂರಿನ ನಿವಾಸಿಗಳಿಗೆ ಭರ್ಜರಿ ಶಾಕ್ ಕೊಡುವುದಕ್ಕೆ ಶುರು ಮಾಡಿಕೊಂಡಿದೆ. ಇದೀಗ ಬಿಬಿಎಂಪಿಯು ಜನ ಸಾಮಾನ್ಯರ ಆಕ್ರೋಶಕ್ಕೆ ಮಣಿದು ಬೆಂಗಳೂರಿನಲ್ಲಿ ಪಾರ್ಕಿಂಗ್ ಶುಲ್ಕವನ್ನು ಮರುಪರಿಶೀಲನೆ ಮಾಡುವುದಾಗಿ ಹೇಳಿದೆ. ಹೌದು ಬೆಂಗಳೂರಿನಲ್ಲಿ ಕಸಕ್ಕೆ ಟ್ಯಾಕ್ಸ್ ಹಾಗೂ ಪಾರ್ಕಿಂಗ್ ಶುಲ್ಕ ಭಾರೀ ಗದ್ದಲ ಸೃಷ್ಟಿ ಮಾಡಿತ್ತು. ಇದೀಗ ಈ ವಿಚಾರದಲ್ಲಿ ಮರು ಪರಿಶೀಲನೆ ಮಾಡುವುದಾಗಿ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ. ಆದರೆ ಪೂರ್ತಿ ರಿಲ್ಯಾಕ್ಸ್ ಕೊಟ್ಟಿಲ್ಲ. ಅದೇನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಾಲ್, ರೆಸ್ಟೋರೆಂಟ್, ಸ್ಟಾರ್ ಹೋಟೆಲ್ ಹಾಗೂ ಆಸ್ಪತ್ರೆ ಸೇರಿದಂತೆ ವಿವಿಧ ಭಾಗದಲ್ಲೂ ಪಾರ್ಕಿಂಗ್ ಜಾಗದ ದರ ನಿಗದಿಗೆ ಮುಂದಾಗಿತ್ತು. ಆದರೆ, ಈ ಉದ್ದಿಮೆಗಳ ಮಾಲೀಕರಿಂದ ಬಿಬಿಎಂಪಿಗೆ ಮನವಿ ಬಂದ ಮೇಲೆ ಕೆಲವೊಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹ ಮಾಡುವುದರೊಂದಿಗೆ ವಾಹನ ಪಾರ್ಕಿಂಗ್ ಜಾಗದ ತೆರಿಗೆ ದರ ಪರಿಷ್ಕರಣೆಗೂ ಮುಂದಾಗಿತ್ತು. ಇದೀಗ ಇದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ಹಾಗೂ ವಿರೋಧ ವ್ಯಕ್ತವಾದ ಮೇಲೆ ಪಾರ್ಕಿಂಗ್ ಶುಲ್ಕವನ್ನು ಮರು ಪರಿಶೀಲನೆ ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಹೋಟೆಲ್, ಮಾಲ್ ಹಾಗೂ ಆಸ್ಪತ್ರೆ ಸೇರಿದಂತೆ ಹಲವು ಉದ್ದಿಮೆಗಳಿಗೆ ಬಿಬಿಎಂಪಿಯ ವಿಧಿಸುತ್ತಿರುವ ಕಟ್ಟಡ ಪಾರ್ಕಿಂಗ್ (ಪಾರ್ಕಿಂಗ್ ಜಾಗದ ಶುಲ್ಕ)ಕ್ಕೆ ವಿಧಿಸಲಾಗುತ್ತಿರುವ ತೆರಿಗೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಇದನ್ನು ಕಡಿಮೆ ಮಾಡುವಂತೆ ಮನವಿ ಮಾಡಲಾಗಿತ್ತು. ಇದೀಗ ವಸತಿ ಕಟ್ಟಡದಲ್ಲಿ ಮೀಸಲಿಟ್ಟ ಪಾರ್ಕಿಂಗ್ ಸ್ಥಳದ ಪ್ರತಿ ಚದರ ಅಡಿಗೆ 2 ರೂಪಾಯಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಪ್ರತಿ ಚದರ ಅಡಿಗೆ 3 ರೂಪಾಯಿ ಏಕ ರೂಪದಲ್ಲಿ ದರ ಪರಿಷ್ಕರಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ. ಕಸಕ್ಕೂ ಟ್ಯಾಕ್ಸ್ ಫಿಕ್ಸ್ ಇನ್ನು ಬೆಂಗಳೂರಿನಲ್ಲಿ ಕಸ ಸಂಗ್ರಹಕ್ಕೆ ಟ್ಯಾಕ್ಸ್ ವಿಧಿಸುವ ವಿಚಾರದಲ್ಲಿ ಬಿಬಿಎಂಪಿಯು ಹಿಂದೆ ಸರಿದಿಲ್ಲ. ಕೇಂದ್ರ ಸರ್ಕಾರದ ಘನತ್ಯಾಜ್ಯ ವಿಲೇವಾರಿ ನಿಯಮ ಮತ್ತು ಬಿಬಿಎಂಪಿಯ ಬೈಲಾ ಪ್ರಕಾರ ಕಸ ವಿಲೇವಾರಿಗೆ (ಕಸವನ್ನು ಸಂಗ್ರಹ ಮಾಡುವುದಕ್ಕೆ) ಶುಲ್ಕ ವಿಧಿಸಬಹುದಾಗಿದೆ. ಈಗಾಗಲೇ ದೇಶದ ಸಣ್ಣ ಹಳ್ಳಿಗಳಲ್ಲಿ ಮತ್ತು ದೊಡ್ಡ ನಗರ ಪ್ರದೇಶಗಳಲ್ಲಿ ಕಸ ಸಂಗ್ರಹ ಮಾಡುವುದಕ್ಕೆ ಟ್ಯಾಕ್ಸ್ ಹಾಕಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈಗಾಗಲೇ ವಿವಿಧ ರಾಜ್ಯಗಳಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ಟ್ಯಾಕ್ಸ್ ಸಂಗ್ರಹ ಮಾಡಲಾಗುತ್ತಿದೆ. ಈ ರೀತಿ ನೋಡಿದರೆ ಬೆಂಗಳೂರಿನಲ್ಲಿ ತಡವಾಗಿಯೇ ಜಾರಿ ಮಾಡಲಾಗುತ್ತಿದೆ. ಬಿಬಿಎಂಪಿಯ ನಿಯಮಕ್ಕಿಂತಲೂ ನಾವು ಕಡಿಮೆ ಮೊತ್ತವನ್ನೇ ಸಂಗ್ರಹಿಸುತ್ತಿದ್ದೇವೆ. ಇದೀಗ ಶೇ.50 ರಷ್ಟು ಕಡಿಮೆ ಶುಲ್ಕವನ್ನಷ್ಟೇ ವಸೂಲಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ಕಸದ ಪ್ರಮಾಣ ಹೆಚ್ಚಳವಾಗಿದ್ದು, ಕಸ ವಿಲೇವಾರಿ ಮಾಡುವ ವೆಚ್ಚವೂ ಹೆಚ್ಚಳವಾಗುತ್ತಿದೆ. ಆದರೆ ಇದೀಗ ಸಂಗ್ರಹ ಮಾಡುತ್ತಿರುವ ಶುಲ್ಕದಿಂದ ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ವೆಚ್ಚ ಸಹ ಪೂರ್ಣವಾಗಿ ಭರಿಸುವುದಕ್ಕೆ ಆಗಲ್ಲ. ಇನ್ನು ಏಪ್ರಿಲ್ನಿಂದ ಶುಲ್ಕ ವಿಧಿಸುವುದು ಜಾರಿಗೆ ತರಲಿದ್ದೇವೆ ಎಂದು ಅವರು ಹೇಳಿದ್ದಾರೆ. ಬಿಬಿಎಂಪಿಗೆ 40 ಕೋಟಿ ರೂಪಾಯಿ ನಷ್ಟ: ಇನ್ನು ಬೆಂಗಳೂರಿನಲ್ಲಿ ಪಾರ್ಕಿಂಗ್ ದರ ಪರಿಷ್ಕರಣೆ ಮಾಡುವುದರಿಂದ ನಗರದ ಒಟ್ಟಾರೆ ವಸತಿ ಕಟ್ಟಡಗಳಿಂದ ಸಂಗ್ರಹವಾಗುವ ತೆರಿಗೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಆದರೆ, ವಾಣಿಜ್ಯ ಕಟ್ಟಡದಿಂದ ಸಂಗ್ರಹವಾಗಲಿರುವ ಮೊತ್ತದಲ್ಲಿ 40 ಕೋಟಿ ರೂಪಾಯಿಯಷ್ಟು ಕಡಿಮೆ ಅಥವಾ ನಷ್ಟವುಂಟಾಗಲಿದೆ. ವಾರ್ಷಿಕವಾಗಿ ಬಿಬಿಎಂಪಿಗೆ 211 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿತ್ತು. ಅದರಲ್ಲಿ 170 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಲಿದೆ. ಏಕ ರೂಪ ಹಾಗೂ ಪಾರ್ಕಿಂಗ್ ಶುಲ್ಕವನ್ನು ಸರಳೀಕರಣ ಮಾಡುವ ಉದ್ದೇಶದಿಂದ ಕರಡು ಅಧಿಸೂಚನೆ ಹೊರಡಿಸಿರುವುದಾಗಿ ಪಾಲಿಕೆ ಹೇಳಿದೆ. ಇನ್ನು ಈ ಬಗ್ಗೆ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಆಧಾರಿಸಿ ಪರಿಶೀಲನೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಬಿಬಿಎಂಪಿಯು ಹೇಳಿದೆ.
ಇನ್ನು ನಗರದಲ್ಲಿ ಪಾರ್ಕಿಂಗ್ ತೆರಿಗೆ ಪರಿಷ್ಕರಣೆ ಮಾಡುವ ಹಂತದಲ್ಲಿ ಜನ ಸಾಮಾನ್ಯರಿಗೆ ಹೊರೆ ಹಾಕಲಾಗುತ್ತಿದೆ. ಈ ಮೂಲಕ ಉದ್ದಿಮೆಗಳಿಗೆ ಬಿಬಿಎಂಪಿ ಅನುಕೂಲ ಮಾಡಿಕೊಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಅದನ್ನು ಬಿಬಿಎಂಪಿ ತಳ್ಳಿ ಹಾಕಿದೆ. ತೆರಿಗೆ ಸಂಗ್ರಹವಷ್ಟೇ ಮೂಲಸೌಕರ್ಯವಿಲ್ಲ! ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬರೋಬ್ಬರಿ 4,800 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಸ್ತಿ ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಆದರೆ ಈ ರೀತಿ ಕೋಟ್ಯಾಂತರ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಮಾಡಿದರೂ ಬಿಬಿಎಂಪಿಯು ಬೆಂಗಳೂರಿನಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸುತ್ತಿಲ್ಲ ಎಂದು ಬೆಂಗಳೂರಿಗರು ದೂರಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುರಿದ ಒಂದೇ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ಈ ಮಳೆ ಅವಾಂತರಕ್ಕೆ ಬೆಂಗಳೂರಿನ ಜನ ಬಿಬಿಎಂಪಿ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಿಬಿಎಂಪಿ ಹಾಗೂ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ. ಬೇಕಾಬಿಟ್ಟಿ ತೆರಿಗೆ ಹಾಗೂ ಬೆಲೆ ಏರಿಕೆಯನ್ನು ಮಾಡಲಾಗುತ್ತಿದೆ. ಆದರೆ ಕನಿಷ್ಠ ಮೂಲಸೌಕರ್ಯವನ್ನೂ ಸಹ ನೀಡುತ್ತಿಲ್ಲ ಎಂದು ಜನ ದೂರಿದ್ದಾರೆ. ನಗರದಲ್ಲಿ ಇಂದು ಸುರಿದ ಸಾಧಾರಣ ಮಳೆಗೆ ಹಲವು ರಸ್ತೆಗಳು ಕೆರೆಗಳಂತೆ ಬದಲಾಗಿವೆ. ರಸ್ತೆಗಳಲ್ಲಿ ವಾಹನ ಸವಾರರು ಪರದಾಡಿದರೆ, ಜನ ಸಾಮಾನ್ಯರು ಮೊಣಕಾಲಿನ ವರೆಗೆ ನೀರು ತುಂಬಿಕೊಂಡಿದ್ದ ರಸ್ತೆಗಳಲ್ಲಿ ನಡೆದುಕೊಂಡು ಹೋಗುವ ದೃಶ್ಯಗಳು ಕಂಡುಬಂದವು. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಹೇಳಿದ ಬ್ರ್ಯಾಂಡ್ ಬೆಂಗಳೂರು ಎಂದರೆ ಇದೇನಾ ಅಂತ ಜನ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲು ಶುರು ಮಾಡಿಕೊಂಡಿದ್ದಾರೆ.