ಬೆಂಗಳೂರು: ಒಳಮೀಸಲಾತಿ ಜಾರಿ ಮಾಡೋದಕ್ಕೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ನಾಗಮೋಹನದಾಸ್ ಅವರು ಯಾವುದೇ ಶಿಫಾರಸು ಮಾಡಿದರೂ ಸರ್ಕಾರ ಅದನ್ನು ಜಾರಿ ಮಾಡಲಿದೆ ಎಂದು ಸಚಿವ ಆರ್‌ಬಿ ತಿಮ್ಮಾಪುರ್ ತಿಳಿಸಿದ್ದಾರೆ.

ಒಳಮೀಸಲಾತಿ ಸಂಬಂಧ ಇಂದು ಮಧ್ಯಂತರ ವರದಿ ಕೊಡುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಒಳ ಮೀಸಲಾತಿ ಬಗ್ಗೆ ನಮಗೆ ಬದ್ದತೆ ಇದೆ. ನಾವು ಒಳಮೀಸಲಾತಿ ಜಾರಿ ಮಾಡಿಯೇ ಮಾಡುತ್ತೇವೆ. ವೈಜ್ಞಾನಿಕವಾಗಿ ಅಂಕಿಅಂಶಗಳು ಬೇಕು. ಆ ನಿಟ್ಟಿನಲ್ಲಿ ಆಯೋಗ ರಚನೆ ಮಾಡಲಾಗಿದೆ. ನಾಗಮೋಹನದಾಸ್ (Nagamohan Das) ಹೇಳುವ ಎಲ್ಲಾ ಶಿಫಾರಸು ಸರ್ಕಾರ ಅನುಷ್ಠಾನ ಮಾಡಲಿದೆ ಎಂದು ಹೇಳಿದರು.
ಮಧ್ಯಂತರ ವರದಿ ಯಾಕೆ ಕೊಡುತ್ತಿದ್ದಾರೆ ಗೊತ್ತಿಲ್ಲ. ಏನು ಬೇಕು ಏನು ಬೇಡ ಇದೆ ಅಂತ ಹೇಳುತ್ತಾರೆ. ಅದನ್ನ ನಾವು ಮಾಡುತ್ತೇವೆ. ಅವರು ಏನೇ ಕೊಟ್ಟರೂ ಸರ್ಕಾರ ಅನುಷ್ಠಾನ ಮಾಡಲು ಸಿದ್ಧ ಎಂದರು. ಇನ್ನು ಮೀಸಲಾತಿ ವರದಿ ಹಿನ್ನಲೆಯಲ್ಲಿ ಅನೇಕ ನೇಮಕಾತಿ ಸ್ಥಗಿತವಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಷ್ಟೋ ವರ್ಷಗಳಿಂದ ಮೀಸಲಾತಿ ಬಗ್ಗೆ ಹೋರಾಟ ಆಗುತ್ತಿದೆ. ಇನ್ನು 4-5 ತಿಂಗಳು ತಡೆದುಕೊಳ್ಳಲಿ ಏನು ಆಗಲ್ಲ ಎಂದರು.