ಬೆಂಗಳೂರು: ನಗರದ ದಾಸನಪುರ ಹೋಬಳಿ ಮಾಕಳಿ ಗ್ರಾಮದಲ್ಲಿ 9 ಗುಂಟೆ ಜಾಗ ಒತ್ತುವರಿ ಮಾಡಿದ ಆರೋಪ ಸಂಬಂಧ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಚಿವ ಚಲುವರಾಯಸ್ವಾಮಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ವಿವಾದಿತ ಜಮೀನಿನ ಕ್ರಯ 1923ರಿಂದಲೂ ಅಸ್ವಿತ್ವದಲ್ಲಿದೆ. ಅದನ್ನು ಮೂಲ ಮಾಲೀಕರು ದೇವಾಲಯಕ್ಕೆ ದಾನವಾಗಿ ಮಾಡಿದ್ದರು. ಆ ನಂತರ ಆ ಜಮೀನನ್ನು ಸರ್ಕಾರ 1982ರಲ್ಲಿ ತಿಮ್ಮರಾಯಪ್ಪ ಅವರಿಗೆ ಮಂಜೂರಾಗಿತ್ತು. ಅವರಿಂದ ಅರ್ಜಿದಾರರು ಖರೀದಿಸಿದ್ದಾರೆ. ಅರ್ಜಿದಾರರು ಒತ್ತುವರಿ ಅಥವಾ ಕಬಳಿಕೆ ಮಾಡಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆದರೆ, ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಪ್ರಕರಣದ ವಿವರ: ದಾಸನಪುರ ಹೋಬಳಿಯ ಮಾಕಳಿ ಗ್ರಾಮದ ಸರ್ವೆ ನಂಬರ್ 13ರಲ್ಲಿದ್ದ 3 ಎಕರೆ 13 ಗುಂಟೆ ಭೂಮಿಯನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಸಂಬಂಧ 2023ರ ಸೆ.23ರಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು.
ಈ ಜಮೀನು ಕುರಿತು ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್ಗೆ ನಿರ್ದೇಶನ ನೀಡಿತ್ತು. ಆ ನಂತರ ಸರ್ವೇ ನಡೆಸಿ ಸುಮಾರು 9 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ವರದಿ ಸಲ್ಲಿಸಲಾಗಿತ್ತು. ಅದನ್ನು ಆಧರಿಸಿ ವಿಶೇಷ ನ್ಯಾಯಾಲಯ ಸಚಿವ ಚಲುವರಾಯಸ್ವಾಮಿಗೆ 2024ರ ಮಾರ್ಚ್ 28ರಂದು ಸಮನ್ಸ್ ನೀಡಿತ್ತು. ಆ ಕ್ರಮವನ್ನು ಪ್ರಶ್ನಿಸಿ ಸಚಿವರು ಹೈಕೋರ್ಟ್ ಮೆಟ್ಟಿಲೇರಿದ್ದರು.