ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ಪೊಲೀಸರು ಬಂಧಿಸಿದ್ದ ಬಿಜೆಪಿ ನಾಯಕರಿಗೆ ಸಿಟಿ ರವಿ ಅವರಿಗೆ ಶುಕ್ರವಾರ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಇದರ ಬೆನ್ನಲ್ಲೆ ಹೈಕೋರ್ಟ್ ಆದೇಶ ಸ್ವಾಗತಿಸಿದ ವಿಪಕ್ಷ ಆರ್.ಅಶೋಕ್ ಅವರು ಸಿಎಂ ಮತ್ತು ಡಿಸಿಎಂ ಗೆ ಟಾಂಗ್ ನೀಡಿದ್ದಾರೆ.
‘ಸತ್ಯಮೇವ ಜಯತೇ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಹೈಕೋಟ್ ಆದೇಶ ಸ್ವಾಗತಿಸಿದ್ದಾರೆ. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಅಕ್ರಮವಾಗಿ ಬಂಧಿಸಿದ್ದು ಅತ್ಯಂತ ತಪ್ಪು ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರಂಕುಶವಾದಿ ಧೋರಣೆಗೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ತತಕ್ಷಣವಾಗಿ ಸಿಟಿ ರವಿ ಅವರನ್ನು ಬಿಡುಗಡೆಗೊಳಿಸಿ ಎಂದು ಆದೇಶ ನೀಡಿರುವುದು ಅತ್ಯಂತ ಸ್ವಾಗತಾರ್ಹ ಎಂದು ಅವರು ಹೇಳಿದರು.
ಹಿಟ್ಲರ್ ಧೋರಣೆ ಬಿಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇನ್ನಾದರೂ ತಮ್ಮ ಹಿಟ್ಲರ್ ಧೋರಣೆ ಬಿಡಬೇಕು. ಒಂದು ಜವಾಬ್ದಾರಿಯುತ ಸರ್ಕಾರದ ರೀತಿ ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ಆರ್.ಅಶೋಕ್ ಟಾಂಗ್ ನೀಡಿದ್ದಾರೆ. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಾಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಅವರ ಬೆಂಬಲಿಗರು ಸಿಟಿ ರವಿ ಅವರ ಮೇಲೆ ಹಲ್ಲೆ ಮಾಡಿದ್ದರು. ಅವರ ತಲೆಗೆ ಗಾಯವಾಗಿತ್ತು.