ಬೆಂಗಳೂರು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಹೊಸಹುಡ್ಯ ವ್ಯಾಪ್ತಿಯ 61 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಆದೇಶ ನೀಡಿ 14 ವರ್ಷ ಕಳೆದರೂ ಸರ್ವೇ ಕಾರ್ಯ ಕೈಗೊಳ್ಳದ ರಾಜ್ಯ ಸರ್ಕಾರದ ನಡೆಗೆ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಜ.15ರಂದು ಸರ್ವೇ ನಡೆಸಿ ಡಿ.30ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ನಿಗದಿಪಡಿಸಿದೆ.
ಶ್ರೀನಿವಾಸಪುರ ತಾಲ್ಲೂಕಿನ ನಿವಾಸಿಯೂ ಆಗಿರುವ ಹೈಕೋರ್ಟ್ ವಕೀಲ ಕೆ.ವಿ.ಶಿವಾರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ರಜಾಕಾಲದ ಏಕಸದಸ್ಯಪೀಠ ವಿಚಾರಣೆ ನಡೆಸಿತು.
ಹೈಕೋರ್ಟ್ ಈ ಮೊದಲು ನೀಡಿರುವ ಆದೇಶದ ಅನುಸಾರ ಸರ್ವೇ ಕಾರ್ಯ ನಡೆಸದಿರುವುದಕ್ಕೆ ಪ್ರಕರಣದ ಪ್ರತಿವಾದಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹಾಜರಾಗದಿರುವುದು ಕಾರಣ ಎನ್ನಲಾಗಿದೆ. ಆದರೆ, ಜನವರಿ 15ರಂದು ನಡೆಯುವ ಸರ್ವೇ ಕಾರ್ಯದ ವೇಳೆ ರಮೇಶ್ ಕುಮಾರ್ ಆಗಲೀ ಅಥವಾ ಅವರ ಅಧಿಕೃತ ಪ್ರತಿನಿಧಿಯಾಗಲೀ ಭಾಗವಹಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ರಮೇಶ್ ಕುಮಾರ್ ಅವರಿಗೆ ನೋಟಿಸ್ ಕೊಡಬೇಕು ಎಂದು ಕೋರ್ಟ್ ಸೂಚಿಸಿದೆ.
ನೋಟಿಸ್ ನೀಡಿದ ಬಳಿಕವೂ ಒಂದು ವೇಳೆ ರಮೇಶ್ ಕುಮಾರ್ ಅಥವಾ ಅವರ ಅಧಿಕೃತ ಪ್ರತಿನಿಧಿ ಸರ್ವೇ ಕಾರ್ಯದಲ್ಲಿ ಭಾಗವಹಿಸದೇ ಹೋದಲ್ಲಿ ಸರ್ವೇ ಮುಂದುವರಿಸಬೇಕು. ಸರ್ವೇ ನಡೆಸಿದ ನಂತರ ನೀಡುವ ವರದಿಯನ್ನು ಆಕ್ಷೇಪಿಸಿ ಯಾವುದೇ ಮೇಲ್ಮನವಿ ಸಲ್ಲಿಸುವುದಕ್ಕೆ ಅಧಿಕಾರ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಹೊಸಹುಡ್ಯ ವ್ಯಾಪ್ತಿಯ 61 ಎಕರೆ ಅರಣ್ಯ ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೇ ನಡೆಸುವಂತೆ 2010 ಮತ್ತು 2013ರಲ್ಲಿ ಹೈಕೋರ್ಟ್ ಆದೇಶದಂತೆ ರಚನೆಯಾಗಿದ್ದ ಸಮಿತಿ ಬದಲಾಯಿಸಿ ಬೆಂಗಳೂರಿನ ಪ್ರಾದೇಶಿಕ ಆಯುಕ್ತರು 2024ರ ಡಿಸೆಂಬರ್ 7, 19 ಮತ್ತು 26ರಂದು ಹೊರಡಿಸಿರುವ ಅಧಿಸೂಚನೆಗಳು ಮತ್ತು ಒತ್ತುವರಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಸುವುದಕ್ಕೆ ದಿನಾಂಕ ನಿಗದಿಯಾಗಿದ್ದರೂ ಪ್ರಕರಣದ ಪ್ರತಿವಾದಿ ರಮೇಶ್ ಕುಮಾರ್ ಭಾಗವಹಿಸದ ಕಾರಣ ಸರ್ವೇ ನಡೆಸಿಲ್ಲ ಎಂಬ ಅಧಿಕಾರಿಗಳ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದರು.