ಬೆಂಗಳೂರು :- ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಂಗಳೂರು ಜೈವಿಕನಾವೀನ್ಯತೆ ಕೇಂದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದುರ್ಘಟನೆಯ ಕುರಿತು ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಥೆನಾಲ್ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿದೆ ಎಂಬುದು ಕಂಡು ಬಂದಿದೆ. ಒಂದು ಕಂಪನಿ ಸಂಪೂರ್ಣವಾಗಿ ನಾಶವಾಗಿದ್ದು, ಇತರೆ ಇನ್ನೋವೆಶನ್ ಸೆಂಟರ್‌ಗಳು ಹಾನಿಗೊಳಗಾಗಿವೆ. ಯಾರಿಗೂ ಪ್ರಾಣಹಾನಿಯಾಗಿಲ್ಲ ಎಂದು ಹೇಳಿದರು.
ಅಂದಾಜು 100 ಕೋಟಿ ರೂ. ಮೌಲ್ಯದ ವಸ್ತುಗಳು ಹಾನಿಯಾಗಿದೆ. ಸುಮಾರು 60 ವಿವಿಧ ಕಂಪನಿಗಳು ಕೆಲಸ ಮಾಡುತ್ತಿದ್ದು, ಅದರಲ್ಲಿ 20 ಲ್ಯಾಬ್‌ಗಳಿಗೆ ಹಾನಿಯಾಗಿದೆ. ಮಿಥಾನಾಲ್ ಸಂಗ್ರಹಿಸಿಕೊಂಡಿದ್ದರು. ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಿ, ವರದಿ ನೀಡಲಿದ್ದಾರೆ ಎಂದು ತಿಳಿಸಿದರು.