ಬೆಂಗಳೂರು || ಟಿಡಿಆರ್ ನೀಡಿ ಅಗಲೀಕರಣ ಮಾಡುವ ರಸ್ತೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ : ತುಷಾರ್ ಗಿರಿ ನಾಥ್.

ಬೆಂಗಳೂರು || ನ್ಯಾಯ ಕೇಳಿದ್ರೆ ನ್ಯಾಯಾಧೀಶೆ ನಕ್ಕರು, ಲಂಚದ ಬೇಡಿಕೆ ಇಟ್ಟರು: ಸಾವಿಗೂ ಮುನ್ನ ಪತ್ರದಲ್ಲಿ ಟೆಕ್ಕಿ ಹೇಳಿದ್ದೇನು?

ಬೆಂಗಳೂರು: ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಟಿಡಿಆರ್ ನೀಡಿ ಅಗಲೀಕರಣ ಮಾಡಬೇಕಿರುವ ರಸ್ತೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ”ಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ ಸಾರ್ವಜನಿಕರೊಬ್ಬರು, ಕೋಡಿಪಾಳ್ಯ ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಈಗಾಗಲೇ ಟಿಡಿಆರ್ ನೀಡಲಾಗಿದ್ದು, ಕೆಲವರು ಟಿಡಿಆರ್ ನೀಡಿರುವ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಲು ಮನವಿ ಮಾಡಿದರು.

ಅದಕ್ಕೆ ಮುಖ್ಯ ಆಯಕ್ತರು ಪ್ರತಿಕ್ರಿಯಿಸಿ, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು ಕೋಡಿಪಾಳ್ಯ ಮುಖ್ಯ ರಸ್ತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಒತ್ತುವರಿಯಾಗಿದ್ದಲ್ಲಿ 7 ದಿನಗಳ ಒಳಗಾಗಿ ತೆರವುಗೊಳಿಸಿ ವರದಿ ಸಲ್ಲಿಸಬೇಕು. ಅಲ್ಲದೆ ಕೂಡಲೆ ರಸ್ತೆ ಅಗಲೀಕರಣ ಕಾರ್ಯವನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಿದರು.

ಹೇರೋಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿ:

ಹೇರೋಹಳ್ಳಿ ಕೆರೆಯಲ್ಲಿ ರಾಸಾಯನಿಕ ಸೇರಿರುವುದರಿಂದ ಸುಮಾರು 1.5 ಕಿ.ಮೀ ಸುತ್ತಮುತ್ತ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದ್ದು, ಅದಕ್ಕೆ ಕೂಡಲೆ ಪರಿಹಾರ ನೀಡಲು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಹೇರೋಹಳ್ಳಿ ಕೆರೆಗೆ ರಾಸಾಯನಿಕ ಯಾವ ರೀತಿ ಸೇರಿದೆ ಎಂಬುದನ್ನು ವಲಯ ಆಯುಕ್ತರು ಕೆರೆಗಳ ವಿಭಾಗ, ರಾಜಕಾಲುವೆ ವಿಭಾಗ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅದಕ್ಕೆ ಕಾರಣರಾದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಅಲ್ಲದೆ ದುರ್ವಾಸನೆ ಬರುತ್ತಿರುವುದನ್ನು ಕೂಡಲೇ ತಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

49 ಪಾರ್ಕ್ ಗಳ ಅಭಿವೃದ್ಧಿ ಮಾಡಲು ಕೈಗೆತ್ತಿಕೊಳ್ಳಲಾಗಿದೆ:

ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ 139 ಉದ್ಯಾನಗಳು ಬರಲಿದ್ದು, ಈ ಪೈಕಿ 49 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪೈಕಿ ಉದ್ಯಾನ ವಿಭಾಗದ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಉದ್ಯಾನಗಳನ್ನು ಅಭಿವೃದ್ಧಿ ಪಡಿಸಿ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು.

ಕಲ್ಯಾಣಿಗಳ ಸ್ವಚ್ಛತೆ ಮಾಡಿ:

ಆರ್.ಆರ್ ನಗರವಲಯ ವ್ಯಾಪ್ತಿಯಲ್ಲಿ ಕೆರೆಗಳ ಅಂಗಳದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಕಲ್ಯಾಣಿಗಳನ್ನು ಪರಿಶೀಲನೆ ನಡೆಸಿ ಸ್ವಚ್ಛತೆ ಮಾಡದಿದ್ದಲ್ಲಿ, ಕೂಡಲೆ ಅದನ್ನು ಸ್ವಚ್ಛಗೊಳಿಸಲು ಸೂಚನೆ ನೀಡಿದರು.

ರಸ್ತೆ ದುರಸ್ಥಿ ಮಾಡಿಸಿದ್ದಕ್ಕೆ ಧನ್ಯವಾದ ತಿಳಿಸಿದ ನಾಗರೀಕರು:

ಹೊಸಕೆರೆಹಳ್ಳಿ ಕೆರೆ ಕೋಡಿಯ 300 ಮೀಟರ್ ಉದ್ದದ ರಸ್ತೆಗೆ ಸಂಬಂಧಿಸಿದಂತೆ ಕಳೆದ ಬಾರಿ ನಡೆದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ದೂರು ನೀಡಲಾಗಿತ್ತು. ಅದರಂತೆ ರಸ್ತೆ ಮೂಲಭೂತ ಸೌಕರ್ಯ ವಿಭಾಗದಿಂದ ಕೂಡಲೆ ಅಗತ್ಯ ಕ್ರಮ ಕೈಗೊಂಡು ರಸ್ತೆಗೆ ಜೆಲ್ಲಿ ಹಾಕಿ ವಾಹನಗಳ ಸಂಚಾರಕ್ಕೆ ಅನುವಾಗುವಂತೆ ದುರಸ್ತಿ ಪಡಿಸಲಾಗಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಕೂಡಾ ಟೆಂಡರ್ ಆಹ್ವಾನಿಸಲಾಗಿದೆ. ಆದ ಕಾರಣ ಸ್ಥಳೀಯ ನಿವಾಸಿಗಳು ಇಂದು ಆಗಮಿಸಿ ಅಧಿಕಾರಿಗಳಿಗೆ ಹೂಗುಚ್ಛ ನೀಡಿ ದನ್ಯವಾದಗಳನ್ನು ತಿಳಿಸಿದರು.

ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು:

1. ದೊಡ್ಡಬಿದರಕಲ್ಲು ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಮನವಿ.

2. ನಾಗದೇನಹಳ್ಳಿ ವೃತ್ತ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಲು ಮನವಿ.

3. ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಸೈಡ್ ಡ್ರೈನ್ ಹಾಗೂ ಒಳಚರಂಡಿ ದುರಸ್ತಿಯಾಗಿದ್ದು, ಅದನ್ನು ಬಗೆಹರಿಸಲು ಮನವಿ.

4. ಶಿರ್ಕೆ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದು, ಅದನ್ನು ತೆರವುಗೊಳಿಸಲು ಮನವಿ.

5. ಹೆಮ್ಮಿಗೆಪುರ ವಾರ್ಡ್ ನಲ್ಲಿ ಸ್ಲ್ಯಾಬ್ ಮುರಿದುಬಿದ್ದಿದ್ದು, ಅದನ್ನು ಅಳವಡಿಸಲು ಮನವಿ.

6. ಮರದ ಕೊಂಬೆಗಳು ಮನೆಯ ಮೇಲೆ ಬಾಗಿದ್ದು, ಅದನ್ನು ತೆರವುಗೊಳಿಸಲು ಮನವಿ.

7. ಕೆಂಗೇರಿಯಲ್ಲಿರುವ ಬಿಬಿಎಂಪಿ ಕಛೇರಿಯ ಕಟ್ಟಡದಲ್ಲಿ ಲಿಫ್ಟ್ ಸರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ಮನವಿ.

8. ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು, ಬೋನ್ ಗಳ ವ್ಯವಸ್ಥೆ ಮಾಡಲು ಮನವಿ.

9. ಮೈಲಸಂದ್ರ ಕೆರೆಗೆ ಸಪ್ತಗಿರಿ ಲೇಔಟ್ ನಿಂದ ತ್ಯಾಜ್ಯ ನೀರು ಬಿಡುತ್ತಿದ್ದು, ಅದನ್ನು ನಿಯಂತ್ರಿಸಲು ಮನವಿ.

10. ಮೈಸೂರು ರಸ್ತೆ ಬದಿ ಕಸ ಬಿಸಾಡುತ್ತಿದ್ದು, ಅದನ್ನು ತೆರವುಗೊಳಿಸಲು ಮನವಿ.

ಈ ವೇಳೆ ವಲಯ ಆಯುಕ್ತರಾದ ಡಾ. ಸತೀಶ್, ವಲಯ ಜಂಟಿ ಆಯುಕ್ತರಾದ ಡಾ. ಆರತಿ ಆನಂದ್, ಉಪ ಆಯುಕ್ತರಾದ ಅಬ್ದಲ್ ರಬ್, ಮುಖ್ಯ ಅಭಿಯಂತರರಾದ ಸವಯಂಪ್ರಭ, ಕಾರ್ಯಪಾಲಕ ಅಭಿಯಂತರರು, ಪಾಲಿಕೆ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *