ಬೆಂಗಳೂರು: ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಮುಂದಾಗಿರುವ ಸಂದರ್ಭದಲ್ಲಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಟರ್ಮಿನಲ್ 1 ನ್ನು ನವೀಕರಿಸಿ, ಟರ್ಮಿನಲ್ 2ನ್ನು ವಿಸ್ತರಿಸುವ ಮೂಲಕ ಮತ್ತು ಪ್ರಸ್ತಾವಿತ ಟರ್ಮಿನಲ್ 3ನ್ನು ಸ್ಥಾಪಿಸುವ ಮೂಲಕ 115 ಮಿಲಿಯನ್ ಪ್ರಯಾಣಿಕರನ್ನು ಆಕರ್ಷಿಸಲು ಮುಂದಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(BIAL)ದ ಅಂಗಸಂಸ್ಥೆಯಾದ ಬೆಂಗಳೂರು ವಿಮಾನ ನಿಲ್ದಾಣ ನಗರ ಲಿಮಿಟೆಡ್ (BACL) ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾವ್ ಮುನುಕುಟ್ಲ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಎರಡನೇ ಹಂತದ ವಿನ್ಯಾಸ ಕೆಲಸ ಆರಂಭವಾಗಿದ್ದು, ಈ ವರ್ಷಾಂತ್ಯ ವೇಳೆಗೆ ಕೆಲಸವನ್ನು ಪ್ರಾರಂಭಿಸುವ ಭರವಸೆಯಿದೆ ಎಂದರು.
ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ – ಜಾಗತಿಕ ಹೂಡಿಕೆದಾರರ ಸಭೆಯ ಸಂದರ್ಭದಲ್ಲಿ ಮುನುಕುಟ್ಲ ಮಾತನಾಡಿ, ‘ಭಾರತದ ಮುಂದಿನ ನಾವೀನ್ಯತೆ ಶಕ್ತಿಕೇಂದ್ರ: ಕ್ವಿನ್ ಸಿಟಿಗೆ ಕರ್ನಾಟಕದ ನೀಲನಕ್ಷೆ’ ಕುರಿತು ನಡೆದ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. 2022 ರಲ್ಲಿ, ಟರ್ಮಿಲ್ 2 ಕಾಮಗಾರಿ ಪೂರ್ಣಗೊಂಡು ಕಾರ್ಯಾಚರಣೆ ಆರಂಭವಾಗಿತ್ತು. ಪ್ರಸ್ತುತ, ನಾವು 2 ಬಿಲಿಯನ್ ಡಾಲರ್ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಟರ್ಮಿನಲ್ 2ನ್ನು ವಿಸ್ತರಿಸುತ್ತಿದ್ದೇವೆ ಮತ್ತು 2.5 ಮಿಲಿಯನ್ ಚದರ ಮೀಟರ್ ವಿನ್ಯಾಸ ನಡೆಯುತ್ತಿದೆ. ವರ್ಷದ ಅಂತ್ಯದ ವೇಳೆಗೆ ನಾವು ನಿರ್ಮಾಣವನ್ನು ಪ್ರಾರಂಭಿಸುತ್ತೇವೆ ಎಂದರು.
ಟರ್ಮಿನಲ್ 1ರ ನವೀಕರಣ ಕಾರ್ಯ ನಡೆಯುತ್ತಿದೆ. ಟರ್ಮಿನಲ್ 2ರ ವಿಸ್ತರಣೆಯೊಂದಿಗೆ ವಾರ್ಷಿಕವಾಗಿ 80 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ ಎಂದು ಅವರು ಹೇಳಿದರು. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ, ನಾವು ಸುಮಾರು 42 ಮಿಲಿಯನ್ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಹೊಂದಿಸುವ ಗುರಿ ತಲುಪುತ್ತೇವೆ. ಶೇಕಡಾ 13 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ ಬೆಳೆಯುತ್ತಿದ್ದಾರೆ. ಟರ್ಮಿನಲ್ 3ನ್ನು ಪ್ರಾರಂಭಿಸಿದ ನಂತರ, ಹೆಚ್ಚುವರಿಯಾಗಿ 35 ಮಿಲಿಯನ್ ಪ್ರಯಾಣಿಕರನ್ನು ಸೇರಿಸಬಹುದು. ನಾವು 115 ಮಿಲಿಯನ್ ಪ್ರಯಾಣಿಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 75 ದೇಶೀಯ ತಾಣಗಳು ಮತ್ತು 30 ಅಂತಾರಾಷ್ಟ್ರೀಯ ತಾಣಗಳಿಗೆ ಸಂಪರ್ಕ ಹೊಂದಿದೆ. ಪ್ರಸ್ತುತ, ನಮ್ಮ ಅಂತಾರಾಷ್ಟ್ರೀಯ ಸಂಚಾರವು ಶೇಕಡಾ 15 ರಷ್ಟಿದೆ. ನಾವು ಅದನ್ನು ಶೇಕಡಾ 22ರಿಂದ 25 ಕ್ಕೆ ಹೆಚ್ಚಿಸಲು ಬಯಸುತ್ತೇವೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದ ಅಂತಾರಾಷ್ಟ್ರೀಯ ವಿಮಾನಗಳ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ. ಇದಕ್ಕೆ ಸಾಕಷ್ಟು ವಿಮಾನಯಾನ ಮಾರುಕಟ್ಟೆ ಪ್ರಚಾರದ ಅಗತ್ಯವಿದೆ.

ನಾವು ಅಮೆರಿಕಾದ ಅನೇಕ ನಗರಗಳೊಂದಿಗೆ ಸಂಪರ್ಕ ಹೊಂದಿದ್ದೇವೆ – ಸ್ಯಾನ್ ಫ್ರಾನ್ಸಿಸ್ಕೊ, ಸಿಯಾಟಲ್, ನ್ಯೂಯಾರ್ಕ್ ಮತ್ತು ಇತರ ನಗರಗಳು ಬೆಂಗಳೂರನ್ನು ದಕ್ಷಿಣ ಭಾರತದ ಅವಕಾಶದ ಬಾಗಿಲು ಆಗಿ ಮಾಡುತ್ತದೆ ಎಂದು ಮುನುಕುಟ್ಲಾ ಹೇಳಿದರು. ವಿಮಾನ ನಿಲ್ದಾಣಗಳು ನಗರಗಳಿಗೆ ಆರ್ಥಿಕ ದ್ವಾರಗಳಾಗಿವೆ. ಕೆಂಪೇಗೌಡ ಏರ್ ಪೋರ್ಟ್ ನಗರದ ಅಭಿವೃದ್ಧಿಗೆ ಒಟ್ಟು ಮೌಲ್ಯದ ಶೇಕಡಾ 5.2 ರಷ್ಟು ಸೇರಿಸಿದೆ ಎಂದರು.
ಕ್ವಿನ್ ಸಿಟಿ ಮತ್ತು ವಿಮಾನ ನಿಲ್ದಾಣ ನಗರದಂತಹ ಯೋಜನೆಗಳು ಸ್ಥಳೀಯರಿಗೆ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ದೇವನಹಳ್ಳಿಯ ಸುತ್ತಮುತ್ತಲಿನ ಆತಿಥ್ಯ ವಲಯ ಮತ್ತು ಈ ಪ್ರದೇಶದಲ್ಲಿ ಹೆಚ್ಚುವರಿಯಾಗಿ 7,000 ಹೋಟೆಲ್ ಕೊಠಡಿಗಳ ಅಗತ್ಯವನ್ನು ಅವರು ಒತ್ತು ಹೇಳಿದರು. ಪ್ರಸ್ತುತ ಹೋಟೆಲ್ಗಳು ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ, 4,000 ಹೊಸ ಕೊಠಡಿಗಳನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿವೆ ಎಂದು ಉದ್ಯೋಗಾವಕಾಶಗಳ ಕುರಿತು ಮುನುಕುಟ್ಲ ಮಾತನಾಡಿದರು.