ಬೆಂಗಳೂರು || ವಕೀಲೆ ಜೀವಾ ಆತ್ಮಹತ್ಯೆ ಕೇಸ್  ಪ್ರಕರಣ :  ಡಿವೈಎಸ್ಪಿ ಕನಕಲಕ್ಷ್ಮಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು || ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಪ್ರಕರಣ : ಡಿವೈಎಸ್ಪಿ ಕನಕಲಕ್ಷ್ಮಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು: ಕಳೆದ ತಿಂಗಳು ಆತ್ಮಹತ್ಯೆಗೆ ಮಾಡಿಕೊಂಡ ವಕೀಲೆ ಎಸ್.ಜೀವಾ ಅವರಿಗೆ 25 ಲಕ್ಷ ರೂ. ಲಂಚ ಬೇಡಿಕೆ ಹಾಗೂ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಮ್ಮನ್ನು ಬಂಧಿಸದಂತೆ ಡಿವೈಎಸ್ಪಿ ಕನಕಲಕ್ಷ್ಮಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ವಿಚಾರಣೆ ನಡೆಸಿ 23ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ ಅವರು ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ.

ಭೋವಿ ನಿಗಮದಲ್ಲಿ ಫಲಾನುಭವಿಗಳ ಸೋಗಿನಲ್ಲಿ ಕೋಟ್ಯಂತರ ರೂ. ಸಾಲ ಪಡೆದ ಅವ್ಯವಹಾರ ಸಂಬಂಧ ಕಳೆದ ಎರಡು ವರ್ಷಗಳಿಂದ ಸಿಐಡಿಯು ಪ್ರತ್ಯೇಕ ನಾಲ್ಕು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಪ್ರಕರಣವೊಂದರಲ್ಲಿ ತನಿಖಾಧಿಕಾರಿಯಾಗಿದ್ದ ಸಿಐಡಿಯ ಡಿವೈಎಸ್ಪಿ ಕನಕಲಕ್ಷ್ಮಿ ಅವರು ವಿಚಾರಣೆ ನೆಪದಲ್ಲಿ ವಕೀಲೆ ಎಸ್.ಜೀವಾ ಅವರಿಗೆ 25 ಲಕ್ಷ ಹಣ ಬೇಡಿಕೆಯಿಟ್ಟು ಮಾನಸಿಕ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಜೀವಾ ಅವರು ನವೆಂಬರ್ 22ರಂದು ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್ನಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ಹೆಸರು ಉಲ್ಲೇಖಿಸಿದ್ದರು. ಈ ಸಂಬಂಧ ಮೃತರ ಸಹೋದರಿ ನೀಡಿದ ದೂರು ಆಧರಿಸಿ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿದ್ದರು.

ಮತ್ತೊಂದೆಡೆ, ಸಿಬಿಐ ತನಿಖೆ ಕೋರಿ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರತ್ಯೇಕ ಎಸ್ಐಟಿ ರಚಿಸಿತ್ತು. ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರು ಸಿಬಿಐನ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ, ಕರ್ನಾಟಕ ಹೋಮ್ ಗಾರ್ಡ್ನ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ ಹಾಗೂ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸೇರಿದಂತೆ ಮೂವರು ಅಧಿಕಾರಿಗಳ ವಿಶೇಷ ತಂಡ ತನಿಖೆ ನಡೆಸುತ್ತಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿರುವ ಹಿನ್ನೆಲೆಯಲ್ಲಿ ಕನಕಲಕ್ಷ್ಮಿ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *