ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಮಿತಿಮೀರಿರುವ ಬಗ್ಗೆ ಕನ್ನಡಿಗರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಭಾಷಾ ವಿಚಾರವಾಗಿ ಕನ್ನಡಿಗರು ಹಾಗೂ ಪರಭಾಷಿಕರ ನಡುವೆ ಪ್ರತಿದಿನವೂ ವಾಗ್ವಾದ ಜೋರಾಗುತ್ತಿದೆ. ಅದರಲ್ಲೂ ಕೆಲ ಹಿಂದಿಭಾಷಿಕರು ಕನ್ನಡ ನೆಲದಲ್ಲೇ ಕನ್ನಡಿಗರಿಗೆ ಧಮ್ಕಿ ಹಾಕುವ ಮಟ್ಟ ತಲುಪಿದ್ದಾರೆ ಎನ್ನುವ ಆರೋಪವಿದೆ. ಇಂತದ್ದೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರತಿದಿನವೂ ಬೆಂಗಳೂರಿಗೆ ಗಂಟುಮೂಟೆ ಕಟ್ಕೊಂಡು ಬಂದಿಳಿಯುತ್ತಿರುವ ಪರಭಾಷಿಕರು, ಸ್ವಲ್ಪ ದಿನಗಳವರೆಗೆ ಸೈಲೆಂಟ್ ಆಗಿದ್ದು ನಂತರ ಬಾಲ ಬಿಚ್ಚುತ್ತಿದ್ದಾರೆ. ಇನ್ನು ಹೆಸರಘಟ್ಟ ರಸ್ತೆಯ ಚಿಕ್ಕಬಾಣಾವರ ಬಳಿಯ ಹೋಟೆಲ್ಗೆ ತೆರಳಿದ್ದ ಕನ್ನಡಿಗನೊಬ್ಬ ಕನ್ನಡದಲ್ಲಿ ಮಾತನಾಡುವಂತೆ ಕೇಳಿದ್ದಾನೆ. ಆದರೆ ಹೋಟೆಲ್ ಸಿಬ್ಬಂದಿ ಕನ್ನಡ ಮಾತಾಡಲ್ಲ ಎಂದು ಜೋರು ಧ್ವನಿಯಲ್ಲೇ ಅವಾಜ್ ಹಾಕಿ, ಹೋಟೆಲ್ನಿಂದ ಹೊರಹೋಗುವಂತೆ ವಾರ್ನಿಂಗ್ ಕೂಡ ಕೊಟ್ಟಿದ್ದಾನೆ ಎನ್ನಲಾಗಿದೆ.
ಇದರಿಂದ ಕೋಪಗೊಂಡ ಕನ್ನಡಿಗ ಮತ್ತೆ ಅಲ್ಲಿದ್ದವರ ಮುಂದೆ ಕರ್ನಾಟಕದಲ್ಲಿ ಕನ್ನಡ ಮಾತನಾಡು ಎಂದು ಕೇಳಿದ್ದಾನೆ. ಇದರಿಂದ ಕೆರಳಿದ ಹೋಟೆಲ್ ಸಿಬ್ಬಂದಿ ಕನ್ನಡಿಗನನ್ನು ಧರಧರನೇ ಹೋಟೆಲ್ ಒಳಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ವೈರಲ್ ಆಗಿದ್ದು, ಕನ್ನಡದ ಬಗ್ಗೆ ಧ್ವನಿ ಎತ್ತಿದವನ ಕುತ್ತಿಗೆ ಪಟ್ಟಿ ಹಿಡಿದು ಹೋಟೆಲ್ ಸಿಬ್ಬಂದಿಯೆಲ್ಲ ಹಲ್ಲೆ ನಡೆಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಕನ್ನಡಿಗ ಹಾಗೂ ಹೋಟೆಲ್ನಲ್ಲಿದ್ದ ಹಿಂದಿ ಸಿಬ್ಬಂದಿ ನಡುವಿನ ಗಲಾಟೆಯು ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆ ಬಳಿ ಇರುವ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕನ್ನಡ ಮಾತಾಡು ಎಂದಿದ್ದಕ್ಕೆ ಹೋಟೆಲ್ನಿಂದ ಆಚೆ ಹೋಗು ಎಂದು ಕನ್ನಡಿಗನ ಮೇಲೆ ಹಿಂದಿಯವ ಹಲ್ಲೆ ನಡೆಸಿದ್ದಾನೆ ಎಂದು ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಕಂಡ ನೆಟ್ಟಿಗರು ಕನ್ನಡಿಗರ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕನ್ನಡ ಮಾತನಾಡು ಎಂದು ಕೇಳಬೇಕಾದ ಪರಿಸ್ಥಿತಿಗೆ ನಾವೆಲ್ಲರೇ ಕಾರಣ. ಮೊದಲಿನಿಂದಲೂ ಪರಭಾಷಿಕರಿಗೆ ಮೃದು ಸ್ವಭಾವ ತೋರಿದ್ದಕ್ಕೆ ತಕ್ಕ ಪಾಠ ಕಲಿಸುತ್ತಿದ್ದಾರೆ. ಕನ್ನಡ ನೆಲಕ್ಕೆ ಬಂದು ಕನ್ನಡಿಗನ ಮೇಲೆಯೇ ಎಲ್ಲರೂ ಸೇರಿ ಹಲ್ಲೆ ನಡೆಸುತ್ತಾರೆ ಎಂದರೆ ಅವರಿಗೆ ರಾಜ್ಯದಲ್ಲಿ ಕಾನೂನಿನ ಭಯ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತೋರಿತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹಲವರು ಈ ವಿಡಿಯೋ ಅನ್ನು ಹಂಚಿಕೊಂಡು ಬೆಂಗಳೂರು ಪೊಲೀಸರು ಹಾಗೂ ಕನ್ನಡಪರ ಹೋರಾಟಗಾರರಿಗೆ ಟ್ಯಾಗ್ ಮಾಡಿದ್ದಾರೆ. ಈ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇವರಿಗೆ ಒಂದು ವೇಳೆ ಕನ್ನಡಿಗನಿಂದ ತೊಂದರೆಯಾಗಿದ್ದರೆ, ಪೊಲೀಸರಿಗೆ ದೂರ ಕೊಡಬಹುದಿತ್ತು. ಅದನ್ನು ಬಿಟ್ಟು ಒಬ್ಬನೇ ಇದ್ದ ಎನ್ನುವ ಕಾರಣಕ್ಕೆ ಹಿಂದಿ ಭಾಷಿಕರು ಈ ರೀತಿ ಗೂಂಡಾಗಿರಿ ತೋರಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಕಿಡಿಕಾರಿದ್ದಾರೆ. Advertisement ಕನ್ನಡಿಗರ ಹಿತರಕ್ಷಣೆಗೆ ನಾವು ಸದಾ ಸಿದ್ಧ ಎಂದು ಬೊಬ್ಬೆ ಹೊಡೆಯುವ ಸರ್ಕಾರ ಹಾಗೂ ರಾಜಕಾರಣಿಗಳು ಈ ಘಟನೆಗಳನ್ನು ಲೆಕ್ಕಕ್ಕೂ ತೆಗೆದುಕೊಳ್ಳುತ್ತಿಲ್ಲ. ಕನ್ನಡ ಭಾಷಾಭಿಮಾನ ಭಾಷಣಗಳಲ್ಲಿದ್ದರೆ ಸಾಲದು ಎಂದು ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಹಿಂದಿಯವರ ಗಾಂಚಾಲಿಗೆ ಬುದ್ಧಿ ಕಲಿಸೋಣ ಬನ್ನಿ ಕನ್ನಡಿಗರೇ ಎಂದೂ ಅಭಿಯಾನ ಶುರು ಮಾಡಿದ್ದಾರೆ.