ಬೆಂಗಳೂರು: ರಾಜ್ಯದ ವಿವಿಧೆಡೆ ಮೈಕ್ರೋ ಫೈನಾನ್ಸ್ಗಳ ಸಾಲ ವಸೂಲಾತಿ ಕಾಟಕ್ಕೆ ಜನರು ಬೇಸತ್ತಿದ್ದು, ಕೆಲವು ಕಡೆ ಗ್ರಾಮವನ್ನೇ ತೊರೆದು ಬೇರೆಡೆ ದುಡಿಯಲು ಹೋಗಿದ್ದಾರೆ. ರಾಣೆಬೆನ್ನೂರಿನ ಮಹಿಳೆಯರು ಮೈಕ್ರೋ ಫೈನಾನ್ಸ್ ವಿರುದ್ಧ ವಿಭಿನ್ನ ರೀತಿಯ ಅಭಿಯಾನಕ್ಕೆ ಮುಂದಾಗಿದ್ದಾರೆ.
ಹೌದು.. ಮೈಕ್ರೋ ಫೈನಾನ್ಸ್ನಿಂದ ತಮ್ಮ ಮಾಂಗಲ್ಯಕ್ಕೆ ಕುತ್ತು ಬಂದಿದ್ದು, ಮಾಂಗಲ್ಯ ಸರವನ್ನು ಉಳಿಸಿ ಎಂದು ಮಹಿಳೆಯರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾವೇರಿ ಪ್ರಧಾನ ಅಂಚೆ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ಅಂಚೆ ಮೂಲಕ ಮಾಂಗಲ್ಯ ಮತ್ತು ಪತ್ರವನ್ನು ಸಿಎಂ ಸಿದ್ದರಾಮಯ್ಯರಿಗೆ ಪೋಸ್ಟ್ ಮಾಡಿ, ನಮ್ಮ ಮಾಂಗಲ್ಯವನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.
ಬಳಿಕ ಜಿಲ್ಲಾಡಳಿತ ಮತ್ತು ಎಸ್ಪಿ ಕಚೇರಿಗೂ ಸಹ ಮಾಂಗಲ್ಯ ಪತ್ರವನ್ನು ನೀಡಿದ್ದಾರೆ. ವಿನಾಕಾರಣ ನಿತ್ಯ ಮನೆಗೆ ಬಂದು ಕಿರಕುಳ ನೀಡುವ ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಹಿಳೆಯರು ಒತ್ತಾಯಿಸಿ, ಅವರ ಕಾಟದಿಂದ ಮುಕ್ತಿ ಕೊಡುವಂತೆ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿರುವ ಜಿಲ್ಲಾಡಳಿತ, ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ.