ಬೆಂಗಳೂರು || ಹಾಲು, ವಿದ್ಯುತ್ ಆಯ್ತು ಈಗ ಪೆಟ್ರೋಲ್, ಡೀಸೆಲ್ ದರ ಏರಿಕೆ… : ಬಿಜೆಪಿಯ ಆಕ್ರೋಶ..?

ಬೆಂಗಳೂರು || ಹಾಲು, ವಿದ್ಯುತ್ ಆಯ್ತು ಈಗ ಪೆಟ್ರೋಲ್, ಡೀಸೆಲ್ ದರ ಏರಿಕೆ... : ಬಿಜೆಪಿಯ ಆಕ್ರೋಶ..?

ಬೆಂಗಳೂರು: ಹಾಲಿನ ಬೆಲೆ, ವಿದ್ಯುತ್ ದರ ಮತ್ತು ಕಸ ಸಂಗ್ರಹಣೆ ಶುಲ್ಕ ಹೆಚ್ಚಳದ ಬೆನ್ನಲ್ಲೇ, ಏಪ್ರಿಲ್ 1ರ ರಾತ್ರಿಯಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ ₹2ರಷ್ಟು ಏರಿಕೆಯಾಗಿದೆ.

ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44ರಿಂದ ಶೇ 21.77ರಷ್ಟಕ್ಕೆ ಏರಿಕೆ ಮಾಡಿ, ಆದೇಶಿಸಿದೆ. ಬೆಂಗಳೂರಿನಲ್ಲಿ ₹89.02ರಷ್ಟು ಇದ್ದ ಡೀಸೆಲ್ ಬೆಲೆ ₹91.02ರಷ್ಟಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇಕಡಾ 3.33ರಷ್ಟು ಹೆಚ್ಚಳವಾಗಲಿದೆ.

*2021ರ ನವೆಂಬರ್ 4ಕ್ಕೂ ಮುನ್ನ ರಾಜ್ಯದಲ್ಲಿ ಡೀಸೆಲ್‌ಗೆ ಶೇ 24ರಷ್ಟು ಮಾರಾಟ ತೆರಿಗೆ ವಿಧಿಸಲಾಗುತ್ತಿತ್ತು. ಆಗ ಪ್ರತಿ ಲೀಟರ್ ಡೀಸೆಲ್‌ ಬೆಲೆ ₹92.03ರಷ್ಟು ಇತ್ತು. 2024ರ ಜೂನ್ 1ರಂದು ಮಾರಾಟ ತೆರಿಗೆಯನ್ನು ಶೇ 18.44ಕ್ಕೆ ಇಳಿಸಲಾಗಿತ್ತು’ ಎಂದು ಆರ್ಥಿಕ ಇಲಾಖೆ ತಿಳಿಸಿದೆ.

‘ಈಗ ತೆರಿಗೆ ದರ ಏರಿಕೆಯ ನಂತರ ಮಾರಾಟ ಬೆಲೆ ಹೆಚ್ಚಳವಾದರೂ, ನೆರೆಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ಡೀಸೆಲ್ ಬೆಲೆ ಕಡಿಮೆ ಇರಲಿದೆ’ ಎಂದು ಸರ್ಕಾರ ತಿಳಿಸಿದೆ.

ಯಾವ ಕ್ಷೇತ್ರಗಳ ಮೇಲೆ ಪ್ರಭಾವ

ಕೃಷಿ ಹಾಗೂ ಬಹುತೇಕ ಉದ್ಯಮಗಳು ಡೀಸೆಲ್ ಅನ್ನೇ ಅವಲಂಬಿಸಿದ್ದು, ದರ ಏರಿಕೆಯೂ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ. ಮುಂದಿನ ದಿನಗಳಲ್ಲಿ ಎಲ್ಲ ವಲಯಗಳ ದರ ಹೆಚ್ಚಳವಾಗಲು ಇದು ಕಾರಣವಾಗಬಹುದು.

ಯಾವ ವಲಯಗಳಲ್ಲಿ ಏನು ಪರಿಣಾಮ..!

• ಸರಕು ಸಾಗಣೆ (ಟ್ರಕ್‌ಗಳು) ಮತ್ತು ಸಾರಿಗೆ (ಬಸ್‌ಗಳು, ಆಟೊಗಳು), ಡೀಸೆಲ್ ಕಾರುಗಳು

• ಕೃಷಿ ಚಟುವಟಿಕೆ (ಟ್ರಾಕ್ಟರ್ ಚಟುವಟಿಕೆಗಳು, ನೀರಿನ ಟ್ಯಾಂಕರ್‌ಗಳು…), ಕೃಷಿ ಉತ್ಪನ್ನಗಳ ಸಾಗಣೆ

• ಡೀಸೆಲ್ ಜನರೇಟ‌ರ್ ಅವಲಂಬಿತ ಕೈಗಾರಿಕೆ, ಉದ್ಯಮ ಮತ್ತು ಸೇವೆಗಳು

• ಕಟ್ಟಡ ನಿರ್ಮಾಣ ಕಾಮಗಾರ

• ಅರ್ಥ್‌ಮೂವಿಂಗ್, ಕೊಳವೆಬಾವಿ, ರಸ್ತೆ ನಿರ್ಮಾಣ ಕಾಮಗಾರಿ

ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯಿಂದ ಅಹೋರಾತ್ರಿ ಧರಣಿ

ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯು ಬುಧವಾರ ಅಹೋರಾತ್ರಿ ಧರಣಿಯೂ ಸೇರಿ, ರಾಜ್ಯವ್ಯಾಪಿ ಸರಣಿ ಹೋರಾಟಗಳನ್ನು ಹಮ್ಮಿಕೊಂಡಿದೆ.

ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಿಗ್ಗೆ 11ಕ್ಕೆ ಅಹೋರಾತ್ರಿ ಧರಣಿ ಆರಂಭವಾಗಲಿದೆ. ಬಿ.ಎಸ್.ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಆ‌ರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು ಧರಣಿಯಲ್ಲಿ ಭಾಗವಹಿಸಲಿದ್ದಾರೆ.

ಇದೇ 5ರಂದು ಎಲ್ಲ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಮಂಡಲ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಲಿದ್ದಾರೆ. ಇದೇ 7ರಿಂದ ವಿವಿಧ ಹಂತಗಳಲ್ಲಿ ರಾಜ್ಯದಾದ್ಯಂತ ಜನಜಾಗೃತಿಗಾಗಿ ‘ಜನಾಕ್ರೋಶ ಯಾತ್ರೆ’ ನಡೆಯಲಿದೆ.

Leave a Reply

Your email address will not be published. Required fields are marked *