ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಅಧ್ಯಕ್ಷರನ್ನಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇಮಕ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆರ್.ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ವಿಭಾಗೀಯ ಪೀಠ ನೋಟಿಸ್ ಜಾರಿಗೊಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಕ್ಸ್.ಎಂ.ಜೋಸೆಫ್ ಮತ್ತು ಕೆಎಸ್ಪಿಸಿಬಿ ಪ್ರತಿನಿಧಿಸಿದ್ದ ವಕೀಲ ಮಹೇಶ್ ಚೌಧರಿ ವಾದ ಆಲಿಸಿದ ಪೀಠವು ಸರ್ಕಾರ, ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯ್ಕೆ ಸಮಿತಿ, ಕೆಎಸ್ಪಿಸಿಬಿ ಸದಸ್ಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಪಿಎಆರ್ ಕಾರ್ಯದರ್ಶಿ ಜಿ.ಸತ್ಯವತಿ, ಮಂಗಳೂರಿನ ಅದ್ಯಾರ್ನಲ್ಲಿರುವ ಸಹ್ಯಾದ್ರಿ ಇಂಜಿಯರಿಂಗ್ ಕಾಲೇಜಿನ ಸಂಶೋಧನಾ ಕನ್ಸಲ್ಟೆನ್ಸಿಯ ನಿರ್ದೇಶಕ ಡಾ.ಮಂಜಪ್ಪ, ಆಯ್ಕೆ ಸಮಿತಿ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರಿಗೆ ನೋಟಿಸ್ ಜಾರಿ ಮಾಡಿ ಆದೇಶಿಸಿತು.
ಅಲ್ಲದೇ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿ ಮತ್ತು ಸೇವಾ ಷರತ್ತು ನಿಯಮಗಳನ್ನು ಪ್ರಶ್ನಿಸಿರುವ ಅರ್ಜಿಯೊಂದಿಗೆ ಹಾಲಿ ಅರ್ಜಿ ಪಟ್ಟಿ ಮಾಡುವಂತೆ ನ್ಯಾಯಾಲಯ ರಿಜಿಸ್ಟ್ರಿಗೆ ನಿರ್ದೇಶಿಸಿದೆ.