ಬೆಂಗಳೂರು: ಜಾತಿ ನಿಂದನೆ, ಬೆದರಿಕೆ, ರಾಜಕೀಯ ವಿರೋಧಿಗಳಿಗೆ ಏಡ್ಸ್ ರಕ್ತ ಇಂಜೆಕ್ಟ್ ಮಾಡುವ ಯತ್ನ ಪ್ರಕರಣಗಳಲ್ಲಿ ಸಿಲುಕಿದ್ದು, ಜಾಮೀನು ಪಡೆದು ಜೈಲಿನಿಂದ ಹೊರಗಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಹಿಳೆಯೊಬ್ಬರು ಜಾತಿ ನಿಂದನೆ, ಹಲ್ಲೆ ಆರೋಪ ಮಾಡಿದ್ದಾರೆ. ಇದರ ಆಧಾರದಲ್ಲಿ ಶಾಸಕರು ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ FIR ದಾಖಲಾಗಿದೆ. ಈ ಬಾರಿ ಮುನಿರತ್ನ ಅವರಿಗೆ ಕಾನೂನು ಕುಣಿಗೆ ಮತ್ತಷ್ಟು ಬಿಗಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮತ್ತವರ ಆರು ಮಂದಿ ಸಹಾಯಕರ ವಿರುದ್ಧ 20 ವರ್ಷದ ಮಹಿಳೆ ದೂರು ನೀಡಿದ್ದಾರೆ. ಈ ಎಲ್ಲ ಏಳು ಮಂದಿ ವಿರುದ್ಧ ಆರ್ಎಂಸಿ ಯಾರ್ಡ್ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಸಕ ಮುನಿರತ್ನ ಸೇರಿದಂತೆ, ನವೀನ್, ಶ್ರೀರಾಮ, ಪೀಣ್ಯ ಕಿಟ್ಟಿ, ವಸಂತಕುಮಾರ್, ಚನ್ನಕೇಶವ ಮತ್ತು ಪೀಣ್ಯ ಗಂಗಾ ವಿರುದ್ಧ FIR ದಾಖಲಾಗಿದೆ. ಘಟನೆಯ ಹಿನ್ನೆಲೆ, ಆರೋಪವೇನು? ದೂರುದಾರೆ ಮಹಿಳೆ ದಿನಗೂಲಿ ಕೆಲಸ ಮಾಡಿಕೊಂಡಿದ್ದರು. ಸಚಿವರು ಸೇರಿದಂತೆ ಏಳು ಮಂದಿ ಕಟ್ಟಡ ನಿರ್ಮಾಣ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ನಮ್ಮ ತಾತ್ಕಾಲಿಕ ಶೆಡ್ಗಳನ್ನು ಕೆಡವಿದ್ದಲ್ಲದೇ, ಮಹಿಳೆಯರ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಎಸ್ಆರ್ಎಸ್ ವೃತ್ತದ ಪೀಣ್ಯ ಪದವಿ ಕಾಲೇಜಿನ ಸಮೀಪ ಅಕ್ಕಮಹಾದೇವಿ ಕೊಳಚೆ ಪ್ರದೇಶದಲ್ಲಿ 60 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದವು. ಕಟ್ಟಡ ಕಾರ್ಮಿಕರು, ದಿನಗೂಲಿ ಕೆಲಸಗಾರರು ಇಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ಸೋಮವಾರ ಬೆಳಿಗ್ಗೆ ಶಾಸಕರು ಮತ್ತವರ ಸಹಾಯಕರು ಸ್ಥಳಕ್ಕೆ ಬಂದು ಮಣ್ಣು ತೆಗೆಯುವ ಯಂತ್ರದಿಂದ ಈ ಪ್ರದೇಶದಲ್ಲಿ ಹಾಕಿದ್ದ ತಾತ್ಕಾಲಿಕ ಶೆಡ್ಗಳನ್ನು ಕೆಡವಿ ಹಾಕಿದರು. ಇದರಿಂದ ನಿವಾಸಿಗಳಿಗೆ ತೊಂದರೆ ಎದುರಾಗಿದೆ ಎಂದರು.
ಸ್ಪಂ ನಿವಾಸಿಗಳು ಶಾಸಕ ಕ್ರಮದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮುನಿರತ್ನ ನಿವಾಸಿಗಳನ್ನು ಕೆಟ್ಟ ಪದಗಳಿಂದ ನಿಂದಿಸಲು ಪ್ರಾರಂಭಿಸಿದರು. ನಿಮ್ಮ ಉತ್ತರ ಕರ್ನಾಟಕದ ಊರುಗಳಿಗೆ ಮರಳಿ ಹೋಗಬೇಕು ಎಂದು ಬೆದರಿಸಿದರು. ಜೊತೆಗೆ ಮಹಿಳೆಯರ ಎದೆಗೆ ಒದ್ದು ಹಲ್ಲೆ ಮಾಡಿದ್ದಾರೆ ಎಂದು ದೂರುದಾರೆ ವಿವರಿಸಿದರು. ಸದ್ಯ ಕಾರ್ಮಿಕರು ಇರುವ ಅಕ್ಕಮಹಾದೇವಿ ಕೊಳೆಗೇರಿ ಪ್ರದೇಶ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಶಾಸಕರು ಇಲ್ಲಿಗೆ ಬಂದು ಗಲಾಟೆ ಮಾಡಿ ಹೋಗಿದ್ದಾರೆ. ಆದರೆ ಸ್ಥಳ ತೆರವಿಗೆ ನಿವಾಸಿಗಳಿಗೆ ಯಾವುದೇ ಸೂಚನೆ ಹೋಗಿಲ್ಲ ಎಂದು ತಿಳಿದು ಬಂದಿದೆ. ಜಾತಿ ನಿಂದನೆ ಆರೋಪ: ನೋಟಿಸ್ ಜಾರಿ ಸಾಧ್ಯತೆ ಘಟನೆ ವೇಳೆ ಸ್ಥಳೀಯ ನಿವಾಸಿಗಳು ಮತ್ತು ಶಾಸಕರ ಮಧ್ಯೆ ಮಾತಿನಕ ಚಕಮಕಿ ನಡೆದಿದೆ. ನಿವಾಸಿಗಳು ಸಚಿವರ ನಡೆ ಪ್ರಶ್ನಿಸಿದ್ದಾರೆ. ಈ ವೇಳೆ ಶಾಸಕ ಜಾತಿ ಹಿಡಿದು ಮಾತನಾಡಿ ನಿವಾಸಿಗಳನ್ನು ನಿಂದಿಸಿದ್ದಾರೆ. ಹೀಗಾಗಿ ಜಾತಿ ನಿಂದನೆ ಆರೋಪದಡಿ ಕೇಸು ದಾಖಲಾಗಿದೆ. ಶಾಸಕ ಮುನಿರತ್ ಸೇರಿದಂತೆ ಏಳು ಮಂದಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಬಿಎನ್ಎಸ್ನ ಇತರ ವಿಭಾಗಗಳ ಅಡಿ ದೂರು ದಾಖಲಾಗಿದೆ. ಸದ್ಯ ಪ್ರಕರಣ ತನಿಖೆ ಆರಂಭಿಸಿರುವ ಆರ್ಎಂಸಿ ಯಾರ್ಡ್ ಪೊಲೀಸರು ವಿಚಾರಣೆಗಾಗಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಿದ್ದಾರೆ.