ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ಯೋಜನೆಗಳಾದ ಹಳದಿ ಮೆಟ್ರೋ ಮಾರ್ಗ ಮತ್ತು ನೀಲಿ ಮೆಟ್ರೋ ಮಾರ್ಗಗಳ ಬಳಿಕ ಅತೀ ಹೆಚ್ಚು ಗಮನ ಸೆಳೆಯುತ್ತಿರುವ ಹೊಸ ಯೋಜನೆ ಎಂದರೆ ಹೆಬ್ಬಾಳ-ಸರ್ಜಾಪುರ ಮಾರ್ಗ ಯೋಜನೆ. 36 ಕೀಲೋ ಮೀಟರ್ ಮಾರ್ಗದಲ್ಲಿ ಪ್ರಮುಖ ಕಾಮಗಾರಿಗೆ ಜಾಗದ ಅಗತ್ಯತೆ ಇದೆ. ಇದಕ್ಕಾಗಿ ಮೆಟ್ರೋ ಅಧಿಕಾರಿಗಳು ಸಲ್ಲಿಸಿರುವ ಮನವಿಗೆ ಸರ್ಕಾರ ಶೀಘ್ರವೇ ಸ್ಪಂದಿಸಬೇಕು ಎಂದು ಬಿಜೆಪಿ ಶಾಸಕ ಮನವಿ ಮಾಡಿದ್ದಾರೆ.
ಹೌದು, ಹೆಬ್ಬಾಳದ ವ್ಯಾಪ್ತಿಯಲ್ಲಿ ಬಹುಮಾದರಿ ಸಾರಿಗೆ ಕೇಂದ್ರವಾಗಲಿದೆ. ಅದರ ಯೋಜನೆ ಆರಂಭಿಸಲು ನಮ್ಮ ಮೆಟ್ರೋ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. 45 ಎಕರೆ ಜಾಗದ ಪ್ರಸ್ತಾವನೆಗೆ ಸರ್ಕಾರ ಶೀಘ್ರವೇ ಸ್ಪಂದಿಸಬೇಕು. ಭೂಮಿ ನೀಡಿ ಬಹುಮಾದರಿ ಸಾರಿಗೆ ಕೇಂದ್ರ ಸ್ಥಾಪನೆಗೆ ಅನುವು ಮಾಡಿಕೊಡಬೇಕು ಎಂದಿದ್ದಾರೆ.
ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ವ್ಯಾಪ್ತಿಯಲ್ಲಿ 45 ಎಕರೆ ಜಾಗ ಇದೆ. ಇದನ್ನು ನೀಡಿದರೆ ಕಾಮಗಾರಿ ಸಾಧ್ಯವಾಗುತ್ತದೆ. ಆದರೆ ಮಂಡಳಿಗೆ ಭೂಮಿ ನೀಡಿರುವ ಮಾಲೀಕರಿಗೆ ಪರಿಹಾರ ಹಣ ನೀಡಿಲ್ಲ. ಮಾಲೀಕರಿಗೆ ಸಂತೃಪ್ತ ರೀತಿಯಲ್ಲಿ ಪರಿಹಾರ ನೀಡಿ, ಅಗತ್ಯ ಭೂಮಿಯನ್ನು ಮೆಟ್ರೋ ಸಾರಿಗೆ ಯೋಜನೆಗಳಿಗೆ ನೀಡಬೇಕು.
BMRCL ಮನವಿ ಪುರಸ್ಕರಿಸಿ
ಬೆಂಗಳೂರು ವಿಶ್ವದಲ್ಲೇ ಸಂಚಾರ ದಟ್ಟಣೆ ವಿಚಾರದಲ್ಲೂ ಖ್ಯಾತಿ ಪಡೆದಿದೆ. ಇಂತಹ ನಗರದಲ್ಲಿ ಜನರಿಗೆ ಉತ್ತಮ ಸಾರಿಗೆ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. BMRCL ಮನವಿ ಪುರಸ್ಕರಿಸಬೇಕು. ಇದು ಬೆಂಗಳೂರಿನ ಹಿತದೃಷ್ಟಿಯಿಂದ, ಪ್ರಯಾಣಿಕರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ತ್ವರಿತವಾಗಿ ಸರ್ಕಾರ ಸ್ಪಂದಿಸಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ
ಹೆಬ್ಬಾಳ ವ್ಯಾಪ್ತಿಯಲ್ಲಿ KIADB ವಶದಲ್ಲಿರುವ ಅಷ್ಟೂ ಭೂಮಿ ನೀಡುವಂತೆ BMRCL ಕೋರಿದ್ದು, ಮಂಡಳಿ ನಿಗದಿಪಡಿಸಿದ ಹಣ ಪಾವತಿಗೆ ಸಿದ್ಧವಿದೆ. ಹೀಗಿದ್ದರೂ ಕೈಗಾರಿಕೆ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ತನ್ನದೇ ಆದ ಕಾರಣಗಳಿಂದ ಜಾಗ ನೀಡಲು ಮುಂದಾಗಿಲ್ಲ. ಈ ವಿಳಂಬ ಧೋರಣೆಯಿಂದ ಮೆಟ್ರೋ ಯೋಜನೆಗಳಿಗೆ ತೊಂದರೆ ಆಗಬಹದು. ಇಲಾಖೆಗಳ ನಡೆ ಕೆಲವು ಅನುಮಾನಕ್ಕೆ ಕಾರಣವಾಗುತ್ತದೆ ಎಂದು ಅವರು ದೂರಿದರು.
ಕೈಗಾರಿಕೆ ಸಚಿವರು ಸಾರ್ವಜನಿಕ ಹಿತ ಕಾಯಬೇಕು
ಕರ್ನಾಟಕ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಕೂಡಲೇ ಆಸಕ್ತಿ ವಹಿಸಿ ನಮ್ಮ ಮೆಟ್ರೋಗೆ ಕೆಐಎಡಿಬಿ ವಶದಲ್ಲಿರುವ ಜಮೀನು ಹಸ್ತಾಂತರಕ್ಕೆ ಕ್ರಮ ವಹಿಸಬೇಕು. ಯಾವುದೇ ರಿಯಲ್ ಎಸ್ಟೇಟ್ ಪ್ರಭಾವ, ಒತ್ತಡಕ್ಕೆ ಮಣಿಯಬಾರದು. ಜಾಗ ನೀಡಿ ನಗರದ ಸಾರಿಗೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸೂಕ್ತ ಸಹಕಾರ ನೀಡಬೇಕು. ಖಾಸಗಿ ಹಿತಕ್ಕಿಂತ ಸಾರ್ವಜನಿಕ ಹಿತ ಕಾಯಬೇಕು ಎಂದು ಶಾಸಕರು ಮನವಿ ಮಾಡಿಕೊಂಡಿದ್ದಾರೆ
ಇದೇ ಜಾಗವನ್ನು ಸರ್ಕಾರ ಮೆಟ್ರೋಗೆ ಹಸ್ತಾಂತರಿಸಬೇಕು ಎಂದು ಇತ್ತೀಚೆಗೆ ಸಂಸದೆ, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಸಹ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಕೂಡಲೇ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಈ ವಿಚಾರ ಮುನ್ನೆಲೆಗೆ ಬಂದಾಗ ಕಳೆದ ಭಾರಿ ಸಚಿವ ಎಂಬಿ ಪಾಟೀಲ್ ಅವರು, ಮಂಡಳಿ ವಶದಲ್ಲಿರುವ ಜಾಗದ ಮಾಲೀಕರಿಗೆ ಇಂತಿಷ್ಟು ಕೋಟಿ ಪರಿಹಾರ ಹಣವನ್ನು ನಮ್ಮ ಮೆಟ್ರೋ ನೀಡಲಿ ಎಂದು ಮೌಖಿಕವಾಗಿ ಸೂಚಿಸಿದ್ದರು. ಹಣ ನೀಡಲು BMRCL ಸಿದ್ಧವಿದೆ. ಆದರೆ ಮಂಡಳಿ ವಶದಲ್ಲಿರುವ ಭೂಮಿಗೆ ತಾನು ಭಾರೀ ಪ್ರಮಾಣದ ಪರಿಹಾರ ನೀಡುವುದು ಒಳಿತಲ್ಲ ಎಂದು, ಮೊದಲು ಜಾಗ ಹಸ್ತಾಂತರ ಪ್ರಕ್ರಿಯೆ ಲಿಖಿತವಾದಲ್ಲಿ ಪರಿಹಾರ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿಗೆ ಮೆಟ್ರೋ ಅಧಿಕಾರಿಗಳು ಕಾಯುತ್ತಿದ್ದಾರೆ