ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುವ ನಾಲ್ಕು ಸಾರಿಗೆ ನಿಗಮಗಳ ಬಹುದಿನಗಳ ಬೇಡಿಕೆ ಈಡೇರಿಕೆ ಆಗಿದೆ. ಬಸ್ ದರ ಶೇಕಡಾ 15ರಷ್ಟು ಹೆಚ್ಚಳವು ಇಂದು ಜನವರಿ 05ರಿಂದಲೇ ಜಾರಿ ಆಗಿದೆ. ಶನಿವಾರ ಮಧ್ಯ ರಾತ್ರಿಯಿಂದಲೇ ಜಾರಿ ಆಗಿದೆ. ಬಸ್ ಟಿಕೆಟ್ ದರ ಏರಿಕೆ ಜೊತೆಗೆ ಸಾರಿಗೆ ಇಲಾಖೆಯು ಯಾವೆಲ್ಲ ಬಸ್ಗಳಿಗೆ ದರ ಹೆಚ್ಚಳ ಜತೆಗೆ ಸರಕು ಸೇವಾ ತೆರಿಗೆ (GST) ಅನ್ವಯವಾಗಲಿದೆ ಎಂಬುದನ್ನು ಪ್ರಕಟಿಸಿದೆ.
ಬಸ್ ದರ ಏರಿಕೆಗೆ ಒಂದಷ್ಟು ಆಕ್ರೋಶ ವ್ಯಕ್ತವಾದರೂ ಸಹಿತ ಒಂದಷ್ಟು ಕಾರಣ ಕೊಟ್ಟು ಸಮರ್ಥನೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಭಾನುವಾರದಿಂದ ಹೊಸ ದರವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ನಾಲ್ಕು ನಿಗಮಗಳ ಬಸ್ ದರ ಶೇಕಡಾ 15ರಷ್ಟು ಹೆಚ್ಚಾಗಿದೆ. ಆದರೆ AC ಬಸ್ಗಳಿಗೆ ಮಾತ್ರವೇ ಶೇಕಡಾ 15ರಷ್ಟು ಬಸ್ ದರ ಹೆಚ್ಚಳ ಜೊತೆಗೆ GST ಸಹ ಅನ್ವಯವಾಗಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಸಾಮಾನ್ಯ ಪ್ರಯಾಣಿಕರಿಗೆ ತೆರಿಗೆ ಹೆಚ್ಚಳದ ಶಾಕ್ ನೀಡಿದ್ದರೆ, ಎಸಿ ಬಸ್ಗಳಲ್ಲಿ (ಮಲ್ಟಿ ಆಕ್ಸೆಲ್, ಎಸಿ ಸ್ಲಿಪರ್, ಐರಾವತ, ಪಲ್ಲಕ್ಕಿ ಇತ್ಯಾದಿ) ಬಸ್ಗಳಲ್ಲಿ ಓಡಾಡುವವರಿಗೂ ಜಿಎಸ್ಟಿ ಬರೆ ವಿಧಿಸಿದೆ. ಹೀಗಾಗಿ ಎಸಿ ಬಸ್ಗಳ ಟಿಕೆಟ್ ದರ ಶೇಕಡಾ 15ಕ್ಕಿಂತ ಅಧಿಕವಾಗಿ ಏರಿಕೆ ಆಗಿದೆ. ಇದು ಪ್ರತಿಭಟನೆ ಮಾಡುವವರ ಕಣ್ಣು ಮತ್ತಷ್ಟು ಕೆಂಪಾಗಿಸಿದೆ.
ಹತ್ತು ವರ್ಷಗಳ ಹಿಂದೆ ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಆಗಿತ್ತು. 2020ರಲ್ಲಿ KKRTC, KSRTC ಮತ್ತು NWKRTC ದರ ಏರಿಕೆ ಆಗಿತ್ತು. ಅದರ ನಂತರ 2024ರಲ್ಲಿ ಎಲ್ಲ ನಾಲ್ಕು ನಿಗಮಗಳ ಬಸ್ ಟಿಕೆಟ್ ಬೆಲೆ ಒಟ್ಟಿಗೆ ಹೆಚ್ಚಳಗೊಂಡಿದೆ. ದರ ಏರಿಕೆ ಎಷ್ಟು, ಪಟ್ಟಿ ಬೆಂಗಳೂರಿನಿಂದ ಬೀದರ್ಗೆ ಮೊದಲು 821 ರೂಪಾಯಿ ದರ ಇತ್ತು. ಬೆಲೆ ಹೆಚ್ಚಳದ ಬಳಿಕ ಅದೀಗ 936 ರೂಪಾಯಿಗೆ ಏರಿಕೆ ಆಗಿದೆ. ಅಂದರೆ ಒಟ್ಟು 115 ರೂಪಾಯಿ ಹೆಚ್ಚಾಗಿದೆ. KSRTC ಬಿಡುಗಡೆ ಮಾಡಿರುವ ದರ ಹೆಚ್ಚಳದ ಚಾರ್ಟ್ ಪ್ರಕಾರ, ಈ ಮಾರ್ಗದಲ್ಲಿ ಅತೀ ಹೆಚ್ಚು ಏರಿಕೆ ಆದಂತಾಗಿದೆ.
ಬೆಂಗಳೂರು- ತುಮಕೂರು : ಹಾಲಿ ದರ 91 ರೂ. (ಹಿಂದಿನ ದರ 80 ರೂ.) ಬೆಂಗಳೂರು- ಬೆಳಗಾವಿ : ಹಾಲಿ ದರ697 ರೂ. (617ರೂ.) ಬೆಂಗಳೂರು- ಕಲಬುರಗಿ: ಹಾಲಿ ದರ 806 ರೂ. (706ರೂ.) ಬೆಂಗಳೂರು- ಹುಬ್ಬಳ್ಳಿ: ಹಾಲಿ ದರ 563ರೂ. (499ರೂ.) ಬೆಂಗಳೂರು- ಮೈಸೂರು: ಇಂದಿನ ದರ162 ರೂ. (141ರೂ.) ಬೆಂಗಳೂರು- ಶಿವಮೊಗ್ಗ: ಹಾಲಿ ದರ356 ರೂ.(312ರೂ.) ಬೆಂಗಳೂರು- ಮಂಗಳೂರು: ಇಂದಿನ ದರ 454 ರೂ.(398ರೂ.)
ನಷ್ಟದಲ್ಲಿದ್ದ ಬಸ್ಗಳ ಟಿಕೆಟ್ ಬೆಲೆ ಏರಿಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುತ್ತಿದ್ದಂತೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯಿಸಿದ್ದುರ, ರಾಜ್ಯದಲ್ಲಿ ಶೇಕಡಾ 40ರಷ್ಟು ಬಸ್ ಗಳು ನಷ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಶೇಕಡಾ 30ರಷ್ಟು ಬಸ್ಗಳು ಮಾತ್ರ ಲಾಭದಲ್ಲಿ ಓಡುತ್ತಿವೆ ಎಂದಿದ್ದರು. ಹೀಗಾಗಿ ಎಲ್ಲ ಸಾಧಕ ಭಾದಕಗಳ ಕುರಿತು ಚರ್ಚಿಸಿ ಬೆಲೆ ಏರಿಕೆ ತೀರ್ಮಾನಕ್ಕೆ ಬರಲಾಗಿದೆ. ಶಕ್ತಿ ಯೋಜನೆಯಡಿ ಆಧಾರ್ ಕಾರ್ಡ್ ತೋರಿಸಿ ಮಹಿಳೆಯರು ಉಚಿತ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಸ್ಮಾರ್ಟ್ ಕಾರ್ಡ್ ಕೊಡಲು ನಿರ್ಧರಿಸಿದ್ದೇವೆ. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಹೆಚ್ಚಿನ ಜನ ಬಸ್ ಗಳಲ್ಲಿ ಓಡಾಟ ನಡೆಸುತ್ತಾರೆ ಎಂದು ತಿಳಿಸಿದ್ದರು.