ಬೆಂಗಳೂರು: ನಮ್ಮ ಮೆಟ್ರೋ ಯೋಜನೆ ಹಂತ-2ಕ್ಕೆ ಬಿಇಎಂಎಲ್ 42 ರೈಲು ಪೂರೈಕೆ ಮಾಡಬೇಕಿದೆ. ಈಗ ಪುನಃ 402 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿದ್ದು, ಇದರಿಂದಾಗಿ ಪೂರೈಕೆ ಮಾಡಬೇಕಿರುವ ರೈಲುಗಳ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಈಗಾಗಲೇ ನಮ್ಮ ಮೆಟ್ರೋ ರೈಲು ಬೋಗಿಯ ಕೊರತೆಯನ್ನು ಎದುರಿಸುತ್ತಿದ್ದು, ಬೋಗಿಗಳು ಯಾವಾಗ ಪೂರೈಕೆ ಯಾಗಲಿದೆ? ಎಂದು ಕಾದು ನೋಡಬೇಕಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್)ಗೆ ರೈಲುಗಳನ್ನು ನೀಡುವ ಸಲುವಾಗಿ ರೈಲು ಮತ್ತು ರಕ್ಷಣಾ ಕಂಪನಿ ಬಿಇಎಂಎಲ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಬಿಇಎಂಎಲ್ ಆಂತರಿಕ ಇಂಜಿನಿಯರಿಂಗ್ ತಂಡದಿಂದ ಸಂಪೂರ್ಣವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಗೊಳಿಸಿದ ಬೋಗಿಯನ್ನು ಪೂರೈಕೆ ಮಾಡಲಾಗುತ್ತದೆ.
ಈ ಅತ್ಯಾಧುನಿಕ ಚಾಲಕ ರಹಿತ ರೈಲುಗಳು ಆರು ಬೋಗಿಯನ್ನು ಹೊಂದಿರುತ್ತವೆ. ಆಸ್ಟೆನಿಟಿಕ್ ಸ್ಟೇನ್ಲೆಸ್ ಸ್ಟೀಲ್ ಬಳಸಿ ಬೋಗಿಯನ್ನು ನಿರ್ಮಾಣ ಮಾಡಲಾಗುತ್ತದೆ. ಈ ರೈಲಿನ ಪ್ರತಿ ಬೋಗಿಯಲ್ಲಿ ಎರಡು ಹವಾನಿಯಂತ್ರಣ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಪ್ರಯಾಣಿಕರ ಸುರಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯಕ್ಕಾಗಿ ಅತ್ಯುತ್ತಮ ವಿನ್ಯಾಸವನ್ನು ಒಳಗೊಂಡಿರುತ್ತದೆ.
ಮಾರ್ಚ್ 27ರಂದು ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನದಲ್ಲಿ ಈ ಕುರಿತು ಘೋಷಣೆ ಮಾಡಲಾಗಿದೆ. ಇದೇ ಸಮಾವೇಶದಲ್ಲಿ ಛತ್ತೀಸ್ಗಢ ಸರ್ಕಾರವು ರಾಜ್ಯದಲ್ಲಿ ಅತ್ಯಾಧುನಿಕ ಗಣಿಗಾರಿಕೆ ಉಪಕರಣ ತಯಾರಿಕಾ ಘಟಕವನ್ನು ಸ್ಥಾಪಿಸಲು ಬಿಇಎಂಎಲ್ಗೆ ಆಹ್ವಾನಿಸಿದೆ. ಮುಖ್ಯಮಂತ್ರಿಗಳಾದ ವಿಷ್ಣು ದೇವ್ ಸಾಯಿ ಹೂಡಿಕೆದಾರರ ಸಮ್ಮೇಳನದಲ್ಲಿ ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಈ ಕುರಿತು ಅಧಿಕೃತ ಆಹ್ವಾನವನ್ನು ನೀಡಿದ್ದಾರೆ.
ಬಿಇಎಂಎಲ್ ವಿನ್ಯಾಸ, ತಯಾರಿಕೆ, ಪೂರೈಕೆಗಾಗಿ ಮತ್ತು ಸಾಮಾನ್ಯ ಗೇಜ್ ಮೆಟ್ರೋ ಬೋಗಿಯ ಪೂರೈಕೆಗಾಗಿ ವಿಸ್ತರಿತ ಟೆಂಡರ್ ಅನ್ನು ಪಡೆದಿದೆ. ಇದಲ್ಲದೆ, ಬೆಂಗಳೂರು ಮೆಟ್ರೋ ರೈಲು ಯೋಜನೆಗಳ ಅಡಿಯಲ್ಲಿ 15 ವರ್ಷಗಳವರೆಗೆ ಸಿಬ್ಬಂದಿಗೆ ತರಬೇತಿ ನೀಡುವ ಕಾರ್ಯವನ್ನು ಸಹ ಟೆಂಡರ್ ನಿಯಮ ಒಳಗೊಂಡಿದೆ. ಬಿಇಎಂಎಲ್ ಜೊತೆಗಿನ ಒಪ್ಪಂದದಿಂದ ಕಂಪನಿಯೂ ಬಿಎಂಟಿಆರ್ಸಿಎಲ್ ಮೂಲಕ 405 ಕೋಟಿ ರೂ. ಹೆಚ್ಚು ಮೌಲ್ಯದ ಹೆಚ್ಚುವರಿ ಟೆಂಡರ್ ಅನ್ನು ಪಡೆದಿದೆ. ನಮ್ಮ ಮೆಟ್ರೋ ರೈಲು ಯೋಜನೆ ಹಂತ-2 (ರೀಚ್ 6)ಗೆ 7 ಹೆಚ್ಚುವರಿ ಮೆಟ್ರೋ ರೈಲುಗಳನ್ನು (42 ಬೋಗಿ) ಪೂರೈಸುವುದು ಒಳಗೊಂಡಿದ್ದು, ಒಟ್ಟು ರೈಲುಗಳ ಸಂಖ್ಯೆಯು 53 (318 ಬೋಗಿ) ಇಂದ 60 (360 ಬೋಗಿ)ಗೆ ಆಗಲಿದೆ. ಬಿಇಎಂಎಲ್ ಈ ಕುರಿತು ಮಾಹಿತಿ ನೀಡಿದ್ದು, ಬೆಂಗಳೂರು ನಗರದ ಸಂಚಾರವನ್ನು ಸುಧಾರಿಸಲು ವಿನ್ಯಾಸಗೊಳಿಸಿದ ಅತ್ಯಾಧುನಿಕ ಮೆಟ್ರೋ ರೈಲುಗಳನ್ನು ಪೂರೈಸುವುದರ ಮೂಲಕ ಬಿಎಂಆರ್ಸಿಎಲ್ ಜೊತೆ ನಮ್ಮ ದೀರ್ಘಕಾಲದ ಸಹಭಾಗಿತ್ವವನ್ನು ಬಲಪಡಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕರಿಗೆ ಉತ್ತಮ, ಆರಾಮದ ಪ್ರಯಾಣದ ಸೌಕರ್ಯವನ್ನು ಹೊಸ ಬೋಗಿ ನೀಡಲಿದೆ ಎಂದು ತಿಳಿಸಿದೆ.
ಈಗ ತಯಾರಾಗುವ ಹೊಸ ರೈಲುಗಳು ಸುಧಾರಿತ ತಂತ್ರಜ್ಞಾನ ವ್ಯವಸ್ಥೆಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ಪ್ರಯಾಣಿಕರಿಗೆ ಘೋಷಣೆ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಪ್ರಯಾಣಿಕರ ಮೇಲ್ವಿಚಾರಣೆ ವ್ಯವಸ್ಥೆ ಸೇರಿದಂತೆ ವಿವಿಧ ವ್ಯವಸ್ಥೆ ಇದೆ. ನೈಜ ಸಮಯದ ನಿಲ್ದಾಣದ ಮಾಹಿತಿ ನೀಡುವುದು, ಹೆಚ್ಚಿನ ಭದ್ರತೆಯನ್ನು ಬೋಗಿ ಖಚಿತಪಡಿಸಲಿದೆ. ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ಗಳೊಂದಿಗೆ ಸಮನ್ವಯಗೊಳಿಸಲಾದ ವಿದ್ಯುತ್ ಚಾಲಿತ ಸ್ವಯಂಚಾಲಿತ ಬಾಗಿಲುಗಳು ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷತೆ ಒದಗಿಸಲಿದೆ.