ಬೆಂಗಳೂರು : ಬೆಂಗಳೂರು ನಮ್ಮ ಮೆಟ್ರೋದ ಪ್ರಯಾಣ ಬೆಲೆ ಏರಿಕೆ ಮಾಡಿದ ಮೇಲೆ ಇದೀಗ ಬಿಎಂಆರ್ಸಿಎಲ್ ಮತ್ತೊಂದು ಹೊಸ ಬದಲಾವಣೆಗೆ ಮುಂದಾಗಿದ್ದು. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಕಿರಿಕಿರಿ ಹಾಗೂ ತೊಂದರೆ ಆಗುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಮೆಟ್ರೋ ಪ್ರಯಾಣ ದರವನ್ನು ಇಳಿಕೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದಕ್ಕಿಂತ ಇನ್ನಷ್ಟು ಕಷ್ಟ ಕೊಡುವ ಕೆಲಸವನ್ನು ಬಿಎಂಆರ್ಸಿಎಲ್ ಮಾಡುತ್ತಿದೆ. ಆದಾಯ ಹೆಚ್ಚು ಮಾಡಿಕೊಳ್ಳುವುದಕ್ಕೆ ಹಲವು ಆಯ್ಕೆಗಳು ಇದ್ದರೂ ಅದನ್ನು ಮಾಡದೆ ಪ್ರಯಾಣಿಕರಿಗೆ ಕಷ್ಟ ಕೊಡುತ್ತಿದೆ ಎಂದು ಜನ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಮೆಟ್ರೋ (ಬಿಎಂಆರ್ಸಿಎಲ್) ಏಕಾಏಕಿ ಹಲವು ಪಟ್ಟು ಪ್ರಯಾಣದ ದರವನ್ನು ಹೆಚ್ಚಳ ಮಾಡಿದ ಮೇಲೆ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಸಿಕ್ಕಾಪಟ್ಟೆ ಕುಸಿತ ಕಂಡಿದೆ. ಇಷ್ಟಾದರೂ ಮೆಟ್ರೋದ ಪ್ರಯಾಣ ದರ ಏರಿಕೆಯನ್ನು ಹಿಂಪಡೆದಿಲ್ಲ. ಇದೀಗ ಸರಕು ಸಾಗಣೆ ಸೇವೆ ಪ್ರಾರಂಭಿಸುವುದಕ್ಕೆ ಮುಂದಾಗಿದೆ. ಮೆಟ್ರೋ ರೈಲು ನಿಗಮದ ಈ ನಿರ್ಧಾರಕ್ಕೆ ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಟಿಕೆಟ್ ರಹಿತ ಆದಾಯ ಸಂಗ್ರಹ ಮಾಡುವ ಉದ್ದೇಶದಿಂದ ಮೆಟ್ರೋ ದೆಹಲಿ ಮಾದರಿಯನ್ನು ಅನುಸರಿಸುವುದಕ್ಕೆ ಮುಂದಾಗಿದೆ. ನಾನ್ ಪೀಕ್ ಅವರ್ನಲ್ಲಿ ಹೊಸ ಸೇವೆಯನ್ನು ಶುರು ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೆಟ್ರೋ ತನ್ನ ನಿರ್ವಹಣಾ ವೆಚ್ಚವನ್ನು ಸರಿದೂಗಿಸಿಕೊಳ್ಳಲು ಸರ್ಕಸ್ ಮಾಡುತ್ತಿದೆ.
ಮೆಟ್ರೋದಲ್ಲಿ ಸರಕು ಸಾಗಣೆಗೆ ಮುಂದಾಗಿರುವುದರಿಂದ ಜನ ಸಂಚಾರಕ್ಕೆ ಅಡೆತಡೆ ಎದುರಾಗಲಿದೆ ಎನ್ನುವ ಆತಂಕ ಶುರುವಾಗಿದೆ. ಮೆಟ್ರೋದಲ್ಲಿ ನಾನ್ ಪೀಕ್ ಅವರ್ನಲ್ಲಿ ಮಾತ್ರ ಈ ಸೇವೆಯನ್ನು ಪ್ರಾರಂಭಿಸುವುದಾಗಿ ಬಿಎಂಆರ್ಸಿಎಲ್ ಹೇಳಿದೆಯಾದರೂ ಜನರಲ್ಲಿ ಈ ವಿಚಾರವಾಗಿ ಗೊಂದಲ ಶುರುವಾಗಿದೆ. ಈಗಾಗಲೇ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಬಹುದೇ ಎನ್ನುವ ಪ್ರಶ್ನೆ ಎದುರಾಗಿದೆ.
ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆಯು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಪ್ರತಿ ದಿನವೂ ಮೆಟ್ರೋ ಪ್ರಯಾಣಿಕರ ಸಂಖ್ಯೆಯು 1ರಿಂದ 1.50 ಲಕ್ಷ ಇಳಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ಇರುವಾಗಲೇ ಮತ್ತೊಂದು ಸೇವೆ ಪ್ರಾರಂಭಕ್ಕೆ ಬಿಎಂಆರ್ಸಿಎಲ್ ನಿರ್ಧರಿಸಿದೆ.
ಬಿಜೆಪಿಯಿಂದಲೂ ಟೀಕೆ! ಇನ್ನು ಈ ವಿಚಾರವಾಗಿ ಕರ್ನಾಟಕ ಬಿಜೆಪಿ ಸಹ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಬೆಂಗಳೂರು ಮೆಟ್ರೋ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಸರಕು ವಿತರಣಾ / ಸಾಗಣೆ ಸೇವೆಯಾಗಿ ರೂಪಾಂತರಗೊಂಡಿದೆ. ಇದು ಕೇವಲ ಮೆಟ್ರೋವನ್ನು ಜೀವಂತವಾಗಿ ಇರಿಸಿಕೊಳ್ಳುವ ಪ್ರಯತ್ನ ಎಂದು ಆಕ್ರೋಶ ಹೊರ ಹಾಕಿದೆ. ಮೆಟ್ರೋ ಪ್ರಯಾಣ ದರ ಏರಿಕೆಯಾದಾಗಿನಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮೆಟ್ರೋದಲ್ಲಿ ಇದೀಗ ಪೀಕ್ ಅವರ್ಗಳಲ್ಲೇ ರೈಲು ಬೋಗಿಗಳು ತುಂಬಾ ಖಾಲಿ.. ಖಾಲಿಯಾಗಿವೆ. ಸರ್ಕಾರವು ಮೆಟ್ರೋ ರೈಲು ಬೋಗಿಗಳನ್ನು ಸಾರ್ವಜನಿಕ ಗ್ರಂಥಾಲಯಗಳಾಗಿ ಪರಿವರ್ತಿಸುವುದಕ್ಕೂ ಪರಿಗಣಿಸಬಹುದು. ಆದರೆ, ಪುಸ್ತಕಕ್ಕಿಂತ ಹೆಚ್ಚಿನ ವೆಚ್ಚವನ್ನಾಗಿ “ಗ್ರಂಥಾಲಯ ಭೇಟಿ ಶುಲ್ಕ”ವನ್ನು ಸಹ ವಿಧಿಸಿದರೂ ವಿಧಿಸಬಹುದು ಎಂದು ವ್ಯಂಗ್ಯವಾಡಿದೆ.