ಬೆಂಗಳೂರು: ಚೀನಾ ವರ್ಷದಿಂದ ವರ್ಷಕ್ಕೆ ಇತರ ದೇಶಗಳಿಗೆ ಬಹಳ ಅಪಾಯಕಾರಿ ವೈರಸ್ಗಳನ್ನು ಕೊಡುಗೆಯಾಗಿ ನೀಡುತ್ತಿದೆ. ವಿಶ್ವಕ್ಕೆ ಕೊರೊನಾದಂತಹ ಮಹಾಮಾರಿಯನ್ನು ಕೊಡುಗೆಯಾಗಿ ನೀಡಿದ್ದ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಅಟ್ಟಹಾಸ ಜೋರಾಗಿದೆ. ಚೀನಾದಲ್ಲಿ ವೈರಸ್ ಬಂದರೆ ನಮಗೇನು ಅಂತಾ ನಿರ್ಲಕ್ಷಿಸುವ ಮುನ್ನ ಈ ಸ್ಟೋರಿ ಸಂಪೂರ್ಣವಾಗಿ ಓದಿ. ಯಾಕೆಂದರೆ ಇದೇ ವೈರಸ್ ಈಗ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ.
ಹೌದು ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ HMPV ವೈರಸ್ ಅಂದರೆ ಹ್ಯೂಮನ್ ಮೆಟಾನ್ಯುಮೊವೈರಸ್ ಭಾರತಕ್ಕೆ ಅದರಲ್ಲೂ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಕರ್ನಾಟಕದಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ನ ಮೊದಲ ಕೇಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ. ಬೆಂಗಳೂರಿನ 8 ತಿಂಗಳ ಮಗುವಿಗೆ ಹ್ಯೂಮನ್ ಮೆಟಾನ್ಯುಮೊವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಹ್ಯೂಮನ್ ಮೆಟಾನ್ಯುಮೊವೈರಸ್ ಲಕ್ಷಣಗಳೇನು? ಹ್ಯೂಮನ್ ಮೆಟಾನ್ಯುಮೊವೈರಸ್ ರೋಗದ ಲಕ್ಷಣ ಸಾಮಾನ್ಯ ಜ್ವರದಂತೆ ಇರುತ್ತದೆ. ಜ್ವರ, ಮೂಗು ಸೋರುವುದು, ಗಂಟಲು ಕೆರತ ಅಥವಾ ನೋವು, ಅತಿಯಾದ ಕೆಮ್ಮು, ಉಸಿರುಗಟ್ಟುವುದು, ಇತರ ಉಸಿರಾಟದ ತೊಂದರೆಗಳ ಜೊತೆ ದೇಹದಲ್ಲಿ ದದ್ದುಗಳು ಏಕಾಏಕಿ ಕಾಣಿಸಿಕೊಳ್ಳುತ್ತದೆ.
ಹ್ಯೂಮನ್ ಮೆಟಾನ್ಯುಮೊವೈರಸ್ ಯಾರಿಗೆ ಹೆಚ್ಚು ಅಪಾಯಕಾರಿ? ಈ ಹೊಸ ವೈರಸ್ ಆಗಿರುವ ಹ್ಯೂಮನ್ ಮೆಟಾನ್ಯುಮೊವೈರಸ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಈ ಕೆಳಗಿನ ವಯಸ್ಸಿನವರು ಈ ಬಗ್ಗೆ ಹೆಚ್ಚು ಮುಂಜಾಗ್ರತಾ ಕ್ರಮ ವಹಿಸಬೇಕು.
*ನವ ಶಿಶುಗಳು *ಚಿಕ್ಕ ಮಕ್ಕಳು *ಹಿರಿಯ ವಯಸ್ಕರು *ಉಸಿರಾಟ ಸಮಸ್ಯೆ ಹೊಂದಿರುವವರು *ಹೃದಯ ಸಮಸ್ಯೆ ಹೊಂದಿರುವವರು *ರೋಗನಿರೋಧಕ ಶಕ್ತಿ ಸಮಸ್ಯೆ ಹೊಂದಿರುವವರು ಈ ಬಗ್ಗೆ ಎಚ್ಚರ ವಹಿಸಬೇಕು.