ಬೆಂಗಳೂರು: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಈ ರೀತಿ ಇರುವಾಗಲೇ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಈಗಾಗಲೇ ಪೊಲೀಸರು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ತೆಗೆದುಕೊಳ್ಳಲಾಗಿದೆ. ಇದೀಗ ಈ ಸಂಬಂಧ ಮಾತನಾಡಿರುವ ಡಿ.ಕೆ ಶಿವಕುಮಾರ್ ಅವರು ನಿಯಮಗಳಿಗೆ ಅನುಸಾರವಾಗಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಮಾಡಬೇಕು. ನಿಯಮ ಉಲ್ಲಂಘನೆ ಮಾಡಿದರೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅದರಲ್ಲೂ ಮುಖ್ಯವಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಇನ್ನು ಹೋಟೆಲ್ ಮತ್ತು ರೆಸ್ಟೋರೆಂಟ್ ಹಾಗೂ ರೆಸಾರ್ಟ್, ಪಬ್ಗಳು ಸೇರಿದಂತೆ ಎಲ್ಲರೂ ಸರ್ಕಾರದ ನಿಯಮಕ್ಕೆ ಅನುಸಾರವಾಗಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸಬೇಕು. ಸರ್ಕಾರವು ಬ್ಯುಸಿನೆಸ್ ಮಾಡುವವರಿಗೂ ಯಾವುದೇ ಕಾರಣಕ್ಕೂ ಅಡ್ಡಿಪಡಿಸುವುದಿಲ್ಲ. ಆಗಂತ ನಿಯಮಗಳನ್ನು ಗಾಳಿಗೆ ತೂರಿ ಮಾಡುವಂತಿಲ್ಲ. ಇನ್ನು ನಗರದಲ್ಲಿ ಭದ್ರತೆಯ ದೃಷ್ಟಿಯಿಂದ 10,000 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಾನು ಹೇಳುವುದನ್ನು ಎಚ್ಚರಿಕೆ ಎಂದಾದರೂ ಅಂದುಕೊಳ್ಳಲಿ. ಇಲ್ಲ ಮನವಿ ಅಂತನಾದರೂ ತಿಳಿದುಕೊಳ್ಳಿ. ಆದರೆ, ನಿಮಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಹೊಸ ವರ್ಷ ಆಚರಿಸುವವರಿಗೆ ಡಿ.ಕೆ ಶಿವಕುಮಾರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಸರ್ಕಾರಕ್ಕೆ ಮಾತ್ರ ಅನ್ವಯ: ಇನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನ ಹಿನ್ನೆಲೆಯಲ್ಲಿ ದೇಶದಾದ್ಯಂತ ಒಂದು ವಾರಗಳ ಕಾಲ ಶೋಕಾಚರಣೆ ಆಚರಿಸಲಾಗುತ್ತಿದೆ. ಆದರೆ, ಇದು ರಾಜ್ಯ ಸರ್ಕಾರ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗಲಿದೆ. ಖಾಸಗಿ ಕಾರ್ಯಕ್ರಮಗಳಿಗೆ ಇದು ಅನ್ವಯಿಸುವುದಿಲ್ಲ. ಹೀಗಾಗಿ, ಖಾಸಗಿ ಕಾರ್ಯಕ್ರಮಗಳನ್ನು ನಿಯಮಾನುಸಾರ ಆಚರಿಸಿಕೊಳ್ಳಬಹುದಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. 1 ಸಾವಿರ ಕೋಟಿ ವಹಿವಾಟು ನಿರೀಕ್ಷೆ: ಇನ್ನು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಡಿಸೆಂಬರ್ 30 ಹಾಗೂ ಡಿಸೆಂಬರ್ 31ಕ್ಕೆ ರಾಜ್ಯದಾದ್ಯಂತ ಫೂಡ್ ಹಾಗೂ ಮದ್ಯ ಮಾರಾಟದಿಂದಲೇ 1 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ. ಇನ್ನು ಸಾಮಾನ್ಯವಾಗಿ ಪ್ರತಿ ದಿನ ಅಬಕಾರಿ ಇಲಾಖೆಗೆ ಮದ್ಯ ಮಾರಾಟದಿಂದ 150ರಿಂದ 180 ಕೋಟಿ ರೂಪಾಯಿ ಬರುತ್ತದೆ. ಈ ಬಾರಿ ಅದು 250 ಕೋಟಿ ರೂಪಾಯಿ ಮೀರುವ ನಿರೀಕ್ಷೆ ಇದೆ. ಇನ್ನು ಈಗಾಗಲೇ ಕ್ರಿಸ್ಮಸ್ನಿಂದಲೇ ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಹೊಸ ದಾಖಲೆಗಳು ಸೃಷ್ಟಿ ಆಗುತ್ತಿವೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗುವ ನಿರೀಕ್ಷೆ ಇದೆ. ಇನ್ನು ಬೆಂಗಳೂರಿನ ಹಲವು ಪಬ್ಗಳಲ್ಲಿ ಇಂದು ವಿಶೇಷ ಕೊಡುಗೆಗಳನ್ನು ಕೊಡಲಾಗುತ್ತಿದೆ. ಬೆಂಗಳೂರಿನ ಚರ್ಚ್ಸ್ಟ್ರೀಟ್ ಹಾಗೂ ಎಂ.ಜಿ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿದೆ.