ಬೆಂಗಳೂರು || ಚಳಿಗಾಲದಲ್ಲಿಯೂ ನಿಲ್ಲದ ಮಳೆ; ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ?

ಬೆಂಗಳೂರು || ಚಳಿಗಾಲದಲ್ಲಿಯೂ ನಿಲ್ಲದ ಮಳೆ; ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ?

ಬೆಂಗಳೂರು : ತನ್ನ ವಿಶಿಷ್ಟವಾದ ವಾತಾವರಣಕ್ಕೆ ಹೆಸರಾಗಿರುವ ನಗರ. ಬೇಸಿಗೆಯಲ್ಲಿ ಕೂಲ್ ಆಗಿರುವ ಬೆಂಗಳೂರು ಉತ್ತಮ ಮಳೆಯನ್ನೂ ಪಡೆಯುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ನಗರದಲ್ಲಿ ತಂಪಾದ ವಾತಾವರಣ ಇರುತ್ತದೆ. ಆದರೆ ಈ ಬಾರಿ ಎಲ್ಲವೂ ಅಯೋಮಯ ಎನ್ನುವಂತಾಗಿದೆ ಡಿಸೆಂಬರ್ ಚಳಿಗಾಲದಲ್ಲೂ ನಗರದಲ್ಲಿ ಮಳೆಯಾಗುತ್ತಿರುವುದು, ಮೋಡ ಕವಿದ ವಾತಾವರಣದಿಂದ ಜನಕ್ಕೆ ಇದು ಮಳೆಗಾಲವಾ ಚಳಿಗಾಲವಾ ಎನ್ನುವ ಅನುಮಾನ ಶುರುವಾಗಿದೆ.

ಗುರುವಾರ ನಗರದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೆ ಚದುರಿದಂತೆ ತುಂತುರ ಮಳೆಯಾಗಿತ್ತು. ಶುಕ್ರವಾರ ಕೂಡ ಮೋಡ ಕವಿದ ವಾತಾವರಣ ಮುಂದುವರೆಯುವ ಜೊತೆಗೆ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ತುಂತುರು ಮಳೆ ಸುರಿದಿದೆ.

ನಿರಂತರ ಮಳೆಯಿಂದಾಗಿ ನಗರ ಫುಲ್ ತಂಪಾಗಿದ್ದು ಜನ ಚಳಿಯಿಂದ ನಡುಗುವಂತಾಯಿತು. ಮಧ್ಯಾಹ್ನವಾದರೂ ಚಳಿ ಚಳಿ ವಾತಾವರಣವಿತ್ತು. ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದ್ದ ಕಾರಣ ಸಾರ್ವಜನಿಕರು ಪರದಾಡುವಂತಾಯಿತು. ದ್ವಿಚಕ್ರ ವಾಹನ ಸವಾರರು ಮಳೆಯಿಂದಾಗಿ ತೊಂದರೆ ಅನುಭವಿಸಿದರು. ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದು ಹವಾಮಾನ ವೈಪರೀತ್ಯಕ್ಕೆ ಕಾರಣ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶನಿವಾರ ಕೂಡ ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತುಂತುರು ಮಳೆ ಬೀಳುವ ಮುನ್ಸೂಚನೆ ಇದೆ.

ಬೆಂಗಳೂರಿನಲ್ಲಿ ಶನಿವಾರ ಕೂಡ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದ್ದು, ಲಘು ಮಳೆಯಾಗುವ ಮುನ್ಸೂಚನೆಯಿದೆ. ಹಾಸನ, ಮೈಸೂರು, ರಾಮನಗರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಕೂಡ ಮೋಡ ಕವಿದ ವಾತಾವರಣ ಇರಲಿದೆ ಎಂದು ಐಎಂಡಿ ತಿಳಿಸಿದೆ. ಶನಿವಾರದ ಬಳಿಕ ನಗರದ ಹವಾಮಾನ ಸಾಮಾನ್ಯ ಸ್ಥಿತಿಗೆ ಬರುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಮುಗಿದ ಬಳಿಕ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚಿನ ಚಳಿ ದಾಖಲಾಗಲಿದೆ ಎಂದು ಈಗಾಗಲೇ ಹವಾಮಾನ ತಜ್ಞರು ನಿರೀಕ್ಷೆ ಮಾಡಿದ್ದಾರೆ.

ಆರೋಗ್ಯದ ಬಗ್ಗೆ ಇರಲಿ ಎಚ್ಚರ ಬದಲಾಗಿರುವ ಹವಾಮಾನವು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜ್ವರ, ನೆಗಡಿ, ಕೆಮ್ಮು ಸಾಮಾನ್ಯವಾಗಿದೆ. ನಿರಂತರ ಮಳೆ ಮತ್ತು ಚಳಿ ಇರುವ ಕಾರಣ ಈ ಸಂದರ್ಭದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *