ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಫೆಬ್ರವರಿ 9ರ ಭಾನುವಾರದಿಂದ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಏರಿಕೆ ಮಾಡಿದೆ. ಪರಿಷ್ಕೃತ ದರ ಜಾರಿಗೆ ಬಂದ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಬಳಿಕ ಪ್ರಯಾಣದರವನ್ನು ಸ್ವಲ್ಪ ಕಡಿಮೆ ಮಾಡಲಾಗಿದೆ. ಆದರೆ ಈ ಕುರಿತು ಭಾರೀ ಗೊಂದಲಗಳಿವೆ.
ಪ್ರಯಾಣ ದರ ಏರಿಕೆ ಬಳಿಕ ಮೆಟ್ರೋ ರೈಲು ಖಾಲಿ ಖಾಲಿಯಾಗಿದೆ. ಬಿಎಂಟಿಸಿ ಬಸ್, ಖಾಸಗಿ ವಾಹನಗಳನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಪೋಷಕರ ಚಿಂತೆಗೆ ಕಾರಣವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ/ ಕಾಲೇಜುಗಳನ್ನು ಬದಲಾವಣೆ ಮಾಡಬೇಕೆ? ಎಂಬ ಆಲೋಚನೆಯನ್ನು ಹುಟ್ಟುಹಾಕಿದೆ.
ಸುರಕ್ಷಿತವಾಗಿ ಮತ್ತು ವೇಗವಾಗಿ ವಿದ್ಯಾರ್ಥಿಗಳು ಪ್ರಯಾಣ ಮಾಡಲು ನಮ್ಮ ಮೆಟ್ರೋ ಉತ್ತಮ ವ್ಯವಸ್ಥೆಯಾಗಿತ್ತು. ಆದ್ದರಿಂದ ಪೋಷಕರು ಸಹ ಮಕ್ಕಳು ಮೆಟ್ರೋದಲ್ಲಿ ಸುಲಭವಾಗಿ ಸಂಚಾರ ನಡೆಸುತ್ತಾರೆ ಎಂದು ದೂರದ ಶಾಲಾ/ ಕಾಲೇಜುಗಳಿಗೆ ಸೇರಿಸಿದ್ದರು. ಆದರೆ ಈಗ ದರ ಏರಿಕೆಯ ಕಾರಣ ಪೋಷಕರ ಖರ್ಚು ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಪ್ರತಿದಿನ ಸಂಚಾರ ನಡೆಸುವುದರಿಂದ ಪೋಷಕರಿಗೆ ಹೊರೆಯಾಗುತ್ತಿದೆ.
ಪೋಷಕರು ಮನೆಯನ್ನು ನಡೆಸಲು ತಿಂಗಳು ಒಂದಷ್ಟು ಬಜೆಟ್ ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಅವರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. ವಿದ್ಯಾರ್ಥಿಗಳ ಸಂಚಾರದ ಖರ್ಚು ಹೆಚ್ಚಾಗುತ್ತಿದ್ದು, ಪೋಷಕರು ಪರ್ಯಾಯ ಮಾರ್ಗವೇನು? ಎಂದು ಚಿಂತಿಸುವಂತೆ ಮಾಡಿದೆ.
ಶಾಲಾ/ ಕಾಲೇಜು ಬದಲು: ಪ್ರತಿ ತಿಂಗಳು ಮಕ್ಕಳ ಮೆಟ್ರೋ ಸಂಚಾರಕ್ಕಾಗಿ 4 ಸಾವಿರ ರೂ. ಖರ್ಚು ಮಾಡುತ್ತೇವೆ. ಈಗ ದರ ಏರಿಕೆ ಬಳಿಕ ವರ್ಷದಲ್ಲಿ 8 ತಿಂಗಳ ಕಾಲ ಅವರು ಸಂಚಾರ ನಡೆಸಲು ಎಷ್ಟಾಗುತ್ತದೆ? ಈಗ ಹತ್ತಿರದ ಶಾಲೆಗೆ ಮಕ್ಕಳನ್ನು ಸೇರಿಸಲು ಟಿಸಿಗಾಗಿ ಅರ್ಜಿ ಸಲ್ಲಿಸಿದ್ದೇವೆ. ಇದರಿಂದಾಗಿ ವಾರ್ಷಿಕ ನಮ್ಮ ಸಂಚಾರದ ಖರ್ಚು 32,000 ದಿಂದ 15,000 ರೂ.ಗೆ ಇಳಿಕೆಯಾಗುತ್ತದೆ ಎಂದು ಪೋಷಕರೊಬ್ಬರು ಹೇಳಿದ್ದಾರೆ. ಎಂಜಿ ರೋಡ್ ಮೆಟ್ರೋ ನಿಲ್ದಾಣದ ಹತ್ತಿರದ ಶಾಲೆಗೆ ಮಕ್ಕಳನ್ನು ಸೇರಿಸಿದ್ದೆವು. ನಮಗೆ ಡ್ರಾಪ್ ಮತ್ತು ಪಿಕಪ್ ಮಾಡಲು ಆಗುವುದಿಲ್ಲ. ಮಕ್ಕಳು ಮೆಟ್ರೋದಲ್ಲಿ ಸುಲಭವಾಗಿ ಹೋಗಿ ಬರುತ್ತಿದ್ದರು. ಆದರೆ ಈಗ ದರ ಏರಿಕೆ ಕಾರಣ ನಮಗೆ ವೆಚ್ಚ ಅಧಿಕವಾಗುತ್ತಿದೆ ಎಂದು ಪೋಷಕರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಹೊಸಹಳ್ಳಿ-ಆರ್. ವಿ. ರೋಡ್ ನಡುವಿನ ಮೆಟ್ರೋ ಪ್ರಯಾಣ ದರ ಆಗ 28 ರೂ. ಇತ್ತು. ಈಗ ಅದು 48 ರೂ.ಗೆ ಏರಿಕೆಯಾಗಿದೆ. ಪ್ರತಿದಿನ ಇಷ್ಟು ಹಣ ಖರ್ಚು ಮಾಡಿ ಸಂಚಾರ ನಡೆಸುವುದು ಹೊರೆಯಾಗುತ್ತಿದೆ. ಆದ್ದರಿಂದ ಮನೆಯ ಸಮೀಪದ ಕಾಲೇಜಿಗೆ ಸೇರಲು ಬಯಸುತ್ತಿದ್ದೇನೆ ಎಂದು ಕಾಲೇಜು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ನಮ್ಮ ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷ ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ. ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷವಾದ ಬಿಜೆಪಿಯ ನಾಯಕರು ಯಥಾಪ್ರಕಾರ ಸುಳ್ಳು ಮತ್ತು ತಿರುಚಿದ ಮಾಹಿತಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ. ಸರ್ಕಾರದ ಯಾವುದೇ ನೀತಿ-ನಿರ್ಧಾರಗಳನ್ನು ವಿರೋಧಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ, ಸಂವಿಧಾನಬದ್ಧವಾದ ಅವರ ಹಕ್ಕನ್ನು ನಾನು ಗೌರವಿಸುತ್ತೇನೆ’ ಎಂದು ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, “2017ರ ನಂತರ ಮೆಟ್ರೋ ರೈಲಿನ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವ ಕಾರಣ ದರ ಪರಿಷ್ಕರಣೆ ನಡೆಸುವಂತೆ ಬಿಎಂಆರ್ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲೇ ಇದ್ದಿದ್ದರೆ ಬಿಎಂಆರ್ಸಿಎಲ್ ನಮಗೆ ಪತ್ರ ಬರೆಯದೆ, ಕೇಂದ್ರ ಸರ್ಕಾರಕ್ಕೆ ಯಾಕೆ ಪತ್ರ ಬರೆಯುತ್ತಿತ್ತು?” ಎಂದು ಪ್ರಶ್ನೆ ಮಾಡಿದ್ದರು.