ಬೆಂಗಳೂರು || ಬೆಂಗಳೂರು ಜನರಿಗೆ ಚಳಿ ಆತಂಕ, ಅತೀ ಕನಿಷ್ಠ ತಾಪಮಾನ ದಾಖಲು, ಮುನ್ಸೂಚನೆ

ಬೆಂಗಳೂರು || ಬೆಂಗಳೂರು ಜನರಿಗೆ ಚಳಿ ಆತಂಕ, ಅತೀ ಕನಿಷ್ಠ ತಾಪಮಾನ ದಾಖಲು, ಮುನ್ಸೂಚನೆ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ವಿಪರೀತ ಚಳಿ ದಾಖಲಾಗುತ್ತಿದೆ. ಇಂದು ಮಂಗಳವಾರ ನಗರದಲ್ಲಿ ಮತ್ತೆ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಮುಂದಿನ ಐದು ದಿನಗಳ ಕಾಲ ನಗರದಲ್ಲಿ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ. ಭಾನುವಾರ ನಗರದಲ್ಲಿ ಮಳೆ ಆದಾಗಿನಿಂದ ನಗರದಲ್ಲಿ ಬೆಳಗ್ಗೆ ಮತ್ತು ರಾತ್ರಿ ಶೀತ ಅಲೆಯ ಅನುಭವವಾಗುತ್ತಿದೆ.

ಇಂದು ಬೆಳಗ್ಗೆ ಬೆಂಗಳೂರು ನಗರದಲ್ಲಿ 15.2 ಡಿಗ್ರಿ ಸೆಲ್ಸಿಯಸ್ ತಾಪಮಾನ, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ (ಕೆಐಎಎಲ್) 15.4 ಮತ್ತು ಬೆಂಗಳೂರು ಎಚ್ಎಎಲ್ ಏರ್ಪೋರ್ಟ್ನಲ್ಲಿ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದೆ.

ಹವಾಮಾನ ಇಲಾಖೆ ಪ್ರಕಾರ, ನಗರದಲ್ಲಿ ಮುಂದಿನ ಒಂದು ವಾರದ ಕಾಲ ಚಳಿ ಪ್ರಮಾಣದಲ್ಲಿ ಏರಿಳಿಕೆ ಮುಂದುವರಿಯಲಿದೆ ಎಂದು ಊಹಿಸಲಾಗಿದೆ. ಜನವರಿ 24ರವರೆಗೆ ನೀಲಿ ಆಕಾಶ ಇರಲಿದ್ದು, ಮಧ್ಯಾಹ್ನ ಹೆಚ್ಚಿನ ಬಿಸಿಲಿನ ತಾಪ ಕಂಡು ಬರಲಿದೆ. ಒಣಹವೆ ಬೆಂಗಳೂರಿಗೆ ಕಾಡಲಿದೆ. ಇದರೊಂದಿಗೆ ಚಳಿಯು ನಿವಾಸಿಗಳಿಗೆ ಆರೋಗ್ಯ ಕಿರಿ ಕಿರಿ ತಂದೊಡ್ಡಲಿದೆ.

ಜನವರಿ 24 ರವರೆಗೆ ನಗರದಲ್ಲಿ ಕನಿಷ್ಠ ತಾಪಮಾನ 15ರಿಂದ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಬೆಳಗ್ಗೆ ಮತ್ತು ರಾತ್ರಿ ವಿಪರೀತ ಚಳಿ, ಮಂಜಿನ ವಾತಾವರಣ ನಿರ್ಮಾಣವಾಗಲಿದೆ. ಇದನ್ನು ಹೊರತುಪಡಿಸಿದರೆ ಸದ್ಯಕ್ಕೆ ಬೆಂಗಳೂರು ಮಳೆ ಮುನ್ಸೂಚನೆ ಇಲ್ಲ ಎಂದು ಐಎಂಡಿ ಮಾಹಿತಿ ನೀಡಿದೆ.

ಜನರಿಗೆ ಚಳಿ ಆತಂಕ: ತಾಪಮಾನ ಕುಸಿತ ಬೆಂಗಳೂರು ಮಾತ್ರವಲ್ಲದೇ, ಬೆಂಗಳೂರು ಗ್ರಾಮೀಣ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಹಾವೇರಿ, ಬೀದರ್, ವಿಜಯಪುರ, ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಕೊಂಚ ಏರಿಕೆ ಆಗಿದೆ. ಒಣ ಹವೆ ಜೊತೆಗೆ ಜನರಿಗೆ ಚಳಿ ಆತಂಕ ಶುರುವಾಗಿದೆ. ಈ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಕುಸಿತವಾಗಿ, ಕನಿಷ್ಟ ತಾಪಮಾನದಲ್ಲಿ ಭಾರೀ ಬದಲಾವಣೆ ಆಗಿದೆ. ಮೊನ್ನೆಯವರೆಗೂ ಬಂಗಾಳಕೊಲ್ಲಿ ಉಪಸಾಗರದಲ್ಲಿ ಉಂಟಾಗಿದ್ದ ಹವಾಮಾನ ವೈಪರಿತ್ಯ ಪ್ರಭಾವ ಭೀರಿತ್ತು. ಇದೀಗ ರಾಜಸ್ಥಾನ ಮತ್ತು ಗುಜರಾತ್ ಭಾಗದಲ್ಲಿ ಭೂಮಿ ಮೇಲ್ಮೈನಲ್ಲಿ ಕಂಡು ಬಂದಿರುವ ಚಂಡಮಾರುತ ಪರಿಚಲನೆಯ ಪ್ರಭಾವದಿಂದ ಚಳಿ ಮಳೆ ಶುರುವಾಗಿದೆ. ಕರ್ನಾಟಕದಲ್ಲಿ ಚಳಿ, ಒಣಹವೆ ಮುಂದುವರಿಯಲಿದೆ. ಸದ್ಯಕ್ಕೆ ಮಳೆ ಅಬ್ಬರ ತಗ್ಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *