ಬೆಂಗಳೂರು: ಬಿಡದಿ ಸಮೀಪದ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬOಧಿಸಿದOತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂಬುದಾಗಿ ನೀಡಿದ್ದ ಮುಚ್ಚಳಿಕೆಯನ್ನು ಸರ್ಕಾರ ಹಿಂಪಡೆದಿದ್ದು, ಅವರಿಗೆ ಸಂಕಷ್ಟ ಎದುರಾಗಿದೆ.

ಕೇತಗಾನಹಳ್ಳಿಯಲ್ಲಿ ಸುಮಾರು 6 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬOಧ ಸ್ಥಳೀಯ ತಹಸೀಲ್ದಾರ್ ನೀಡಿದ್ದ ನೋಟಿಸ್ ಪ್ರಶ್ನಿಸಿ ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯಪೀಠ ನಡೆಸಿತು.
ವಿಚಾರಣೆ ವೇಳೆ, ಕುಮಾರಸ್ವಾಮಿ ಪರ ವಕೀಲರು, ”ಭೂ ಕಂದಾಯ ಕಾಯಿದೆ ತಿದ್ದುಪಡಿಯ ಸಾಂವಿಧಾನಿಕ ಬದ್ದತೆಯನ್ನು ಪ್ರಶ್ನಿಸಲಾಗಿದೆ. ಆ ಬಗ್ಗೆ ವಿಸ್ತೃತ ವಿಚಾರಣೆ ನಡೆಸಬೇಕು” ಎಂದು ಕೋರಿದರು.
ಇದಕ್ಕೆ ಸರ್ಕಾರಿ ವಕೀಲರು, ”ಹಾಗಿದ್ದರೆ ಸರ್ಕಾರಿ ಪ್ರಕರಣದ ಸಂಬOಧ ತಾನು ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ಈ ಹಿಂದೆ ನೀಡಿದ್ದ ಮುಚ್ಚಳಿಕೆ ಹಿಂಪಡೆಯಲಾಗುವುದು” ಎಂದು ತಿಳಿಸಿದರು.
ತಹಸೀಲ್ದಾರ್‌ಗೆ ಸೂಚನೆ: ಈ ಅಂಶ ದಾಖಲಿಸಿಕೊಂಡ ನ್ಯಾಯಾಲಯ, ”ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪಕ್ಕೆ ಸಂಬOಧಿಸಿದOತೆ ನೀಡಿರುವ ನೋಟಿಸ್ ಕುರಿತ ಎಲ್ಲ ದಾಖಲೆಗಳನ್ನು ಮುಂದಿನ ಒಂದು ವಾರದಲ್ಲಿ ಕುಮಾರಸ್ವಾಮಿ ಅವರಿಗೆ ಒದಗಿಸಬೇಕು. ಅದಾದ ಎರಡು ವಾರಗಳಲ್ಲಿ ತಹಸೀಲ್ದಾರ್ ಅರ್ಜಿದಾರರಿಗೆ ಉತ್ತರ ನೀಡಬೇಕು” ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ವೇಳೆ ಸಮಾಜ ಪರಿವರ್ತನಾ ಸಮುದಾಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಬಸವರಾಜು, ”ಕುಮಾರಸ್ವಾಮಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿರುವ ಮಧ್ಯಂತರ ಆದೇಶ ವಿಸ್ತರಿಸಬಾರದು” ಎಂದು ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬOಧಿ ಡಿ.ಸಿ.ತಮ್ಮಣ್ಣ ಮತ್ತಿತರರು ಕೇತಗಾನಹಳ್ಳಿಯಲ್ಲಿ 14 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆಂಬ ಆರೋಪವಿದ್ದು, ಈ ಕುರಿತು ಲೋಕಾಯುಕ್ತ ನೀಡಿದ್ದ ವರದಿ ಜಾರಿಗೊಳಿಸಲು ಹೈಕೋರ್ಟ್ ಆದೇಶ ನೀಡಿದ್ದರೂ, ಅದನ್ನು ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿತ್ತು.
ಬಳಿಕ ಜಮೀನಿನ ಸರ್ವೆ ಕಾರ್ಯ ನಡೆಸಿದ ಸ್ಥಳೀಯ ತಹಸೀಲ್ದಾರ್, ಕುಮಾರಸ್ವಾಮಿ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅದನ್ನು ಪ್ರಶ್ನಿಸಿ ಹೆಚ್‌ಡಿಕೆ ಕೋರ್ಟ್ ಮೆಟ್ಟಿಲೇರಿದ್ದಾರೆ.