ಬೆಂಗಳೂರು: ‘ಚಿನ್ನ ಕಳ್ಳಸಾಗಣೆ ಆರೋಪದಡಿ ನಟಿ ರನ್ಯಾ ಅಲಿಯಾಸ್ ಹರ್ಷವರ್ಧಿನಿ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ದಿನವಾದ 2025ರ ಮಾರ್ಚ್ 3ರಿಂದ ಮಾರ್ಚ್ 4ರ ಬೆಳಗಿನ ಜಾವದ ತನಕ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಡಿಆರ್‌ಐಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಆರೋಪಿ ರನ್ಯಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ, ‘ದತ್ತಾಂಶಗಳು ಬುಧವಾರ (ಏ.2) ಸಂಜೆ ಡಿಲಿಟ್ ಆಗಲಿರುವ ಹಿನ್ನೆಲೆಯಲ್ಲಿ ಬುಧವಾರ (ಏ.2) ಬೆಳಿಗ್ಗೆ ಈ ಸಂಬಂಧ ಆದೇಶಿಸಲಾಗುವುದು’ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ರನ್ಯಾ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಕಿರಣ್ ಜವಳಿ, ‘ರನ್ಯಾ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ದಿನದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹಿಸಿಡಲು ಸಂಬಂಧಿಸಿದವರಿಗೆ ನಿರ್ದೇಶಿಸಬೇಕು. ಯಾಕೆಂದರೆ, ವಿಮಾನ ನಿಲ್ದಾಣದ ದತ್ತಾಂಶಗಳು 30 ದಿನಗಳ ನಂತರ ಸ್ವಯಂಚಾಲಿತವಾಗಿ ಡಿಲಿಟ್ ಆಗುತ್ತವೆ. ರನ್ಯಾ ಬಂಧನಕ್ಕೆ ಒಳಗಾಗಿ ನಾಳೆಗೆ (ಏ.2) 30 ದಿನಗಳಾಗಲಿದ್ದು, ಅದಕ್ಕೂ ಮುನ್ನ ಸಿಸಿಟಿವಿ ದತ್ತಾಂಶ ಸಂಗ್ರಹಿಸಲು ಆದೇಶಿಸಬೇಕು’ ಎಂದು ಕೋರಿದರು.
ಇದನ್ನು ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಕೆಐಎಎಲ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕಸ್ಟಮ್ಸ್ ಇಲಾಖೆಯ ಪರವಾಗಿ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್, ಡಿಆರ್‌ಐ ಪರ ಮಧು ಎನ್. ರಾವ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರನ್ಯಾ
ಚಿನ್ನ ಕಳ್ಳಸಾಗಣೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧ ಪ್ರಕರಣಗಳ ವಿಚಾರಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಾರ್ಚ್ 14ರಂದು ವಜಾಗೊಳಿಸಿತ್ತು. ನಂತರ ರನ್ಯಾ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ಮಾರ್ಚ್ 27ರಂದು ವಜಾಗೊಳಿಸಿತ್ತು.