ಬೆಂಗಳೂರು || ಎಸ್.ಎಂ.ಕೃಷ್ಣ ನಿಧನ: ರಾಜಕೀಯ ಕೊಡುಗೆ, ಜೀವನಾದರ್ಶ, ಒಡನಾಟ ಸ್ಮರಿಸಿದ ರಾಜಕೀಯ ಗಣ್ಯರು: ಸಂತಾಪ

ಬೆಂಗಳೂರು || ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ

ಬೆಂಗಳೂರು: ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಅನೇಕ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರೊಂದಿಗಿನ ಒಡನಾಟ ನೆನಪಿಸಿಕೊಳ್ಳುವ ಜೊತೆಗೆ ಅವರ ಸಾಧನೆ, ಜೀವನ ಕುರಿತು ಮಹತ್ವದ ವಿಚಾರಣಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಪ್ರಗತಿಗೆ ಅವರು ನೀಡಿದ ಕೊಡುಗಡೆ ನೆನೆದು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಆತ್ಮೀಯರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವರಾದ ಎಸ್.ಎಂ. ಕೃಷ್ಣ ಅವರ ನಿಧನದಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಕರ್ನಾಟಕದ ಪ್ರಗತಿಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಗೂ ಸೂಕ್ತ ಮಾರ್ಗದರ್ಶನ ನೀಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ದುಃಖತಪ್ತ ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಅವರು ತಿಳಿಸಿದ್ದಾರೆ.

ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆ ತೀವ್ರ ನೋವು ತರಿಸಿದ್ದು, ದೇಶ ಒಬ್ಬ ಧೀಮಂತ ನಾಯಕನನ್ನು ನಾವು ಕಳೆದುಕೊಂಡಿದೆ. ರಾಜ್ಯದ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಸ್ಪೀಕರ್ ಆಗಿ, ಕೇಂದ್ರ ಸಚಿವರಾಗಿ ಹಾಗೂ ರಾಜ್ಯಪಾಲರಾಗಿ ಎಸ್.ಎಂ.ಕೃಷ್ಣ ಅವರು ನೀಡಿರುವ ಕೊಡುಗೆ ಅಪಾರವಾದದ್ದು. ಕರ್ನಾಟಕ ಅಭಿವೃದ್ಧಿಯ ವಿಚಾರದಲ್ಲಿ ಎಸ್.ಎಂ.ಕೃಷ್ಣ ಅವರು ತಮ್ಮದೇ ಆದ ದೂರದೃಷ್ಟಿಯನ್ನು ಹೊಂದಿದ್ದರು.

ಬೆಂಗಳೂರಿನ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದ ಎಸ್.ಎಂ.ಕೃಷ್ಣ ಅವರಿಂದಲೇ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಸಿಲಿಕಾನ್ ಸಿಟಿ, ಐಟಿ- ಬಿಟಿ ಸಿಟಿ ಎಂಬ ಹೆಸರು ಬಂದಿತ್ತು. ತಮ್ಮ ಅನನ್ಯವಾದ ಕೊಡುಗೆಗೆ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಬದುಕು ಎಲ್ಲರಿಗೂ ಸ್ಪೂರ್ತಿ ಆಗಿದೆ.

ಹಿರಿಯ ಮುತ್ಸದ್ದಿ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದು, ಕರ್ನಾಟಕಕ್ಕೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಬಂಧು ಬಳಗಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಉನ್ನತ ಹುದ್ದೆಗಳ ದಕ್ಷ ನಿರ್ವಹಣೆ: ಈಶ್ವರ್ ಖಂಡ್ರೆ ಅರಣ್ಯ ಸಚಿವರ ಈಶ್ವರ್ ಖಂಡ್ರೆ ಅವರು ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ರಾಜಕೀಯ ಧುರೀಣರಾದ ಎಸ.ಎಂ. ಕೃಷ್ಣ ಅವರು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿರುವ ಸುದ್ದಿ ದುಃಖ ತರಿಸಿದೆ.

ರಾಜ್ಯದ ವಿಧಾನಸಭಾಧ್ಯಕ್ಷರು, ಉಪ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯಪಾಲರು ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ, ರಾಜ್ಯ ಮತ್ತು ದೇಶಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಸಂತಾಪ ಸೂಚಿಸಿದ್ದಾರೆ. ಸಿಲಿಕಾನ್ ಸಿಟಿಗೆ ಕೃಷ್ಣರ ಕೊಡಗೆ ಮರೆಯಲಾಗದು: ವಿಜಯೇಂದ್ರ ಕರ್ನಾಟಕ

ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ, ಶಿಸ್ತು ಹಾಗೂ ಪ್ರಬುದ್ಧ ಆಡಳಿತಕ್ಕೆ ಮಾದರಿಯಾಗಿದ್ದ ನಾಡಿನ ಇತಿಹಾಸದಲ್ಲಿ ತಮ್ಮ ಸಜ್ಜನಿಕೆ ಹಾಗೂ ಘನತೆಯ ನಡವಳಿಕೆಯಿಂದ ವಿಶೇಷ ಚಾಪು ಮೂಡಿಸಿದ್ದ ಎಸ್.ಎಂ ಕೃಷ್ಣ ಅವರ ನಿಧನ ಸುದ್ದಿಅತ್ಯಂತ ನೋವು ತಂದಿದೆ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿ ಇತಿಹಾಸದಲ್ಲಿ ತಮ್ಮ ಶಾಶ್ವತ ಹೆಜ್ಜೆ ಗುರುತು ಮೂಡಿಸಿರುವ ಹೆಮ್ಮೆಯ ಕನ್ನಡಿಗ ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿಗಳಾಗಿ ಕರ್ನಾಟಕದ ಅಭಿವೃದ್ಧಿಗೆ ಅದರಲ್ಲೂ ಬೆಂಗಳೂರನ್ನು ಸಿಲಿಕಾನ್ ಸಿಟಿ ಎನಿಸಿಕೊಳ್ಳಲು ಕೊಟ್ಟ ಕೊಡುಗೆ ಎಂದೆಂದಿಗೂ ಮರೆಯಲಾಗದು ಎಂದು ಅವರ ಕೊಡುಗೆ ಸ್ಮರಿಸಿದರು. ನಾಲ್ಕು ತಲೆಮಾರಿನ ರಾಜಕಾರಣದ ಕೊಂಡಿ ಕೇಂದ್ರ ಸಚಿವ ಸಂಪುಟದಲ್ಲಿ ವಿವಿಧ ಹುದ್ದೆಗಳ ಜೊತೆಗೆ ಮಹತ್ವದ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಮಹಾರಾಷ್ಟ್ರದ ರಾಜ್ಯಪಾಲರು ಆಗಿ ಸೇವೆ ಸಲ್ಲಿಸಿದ್ದರು. ಕೃಷ್ಣ ಅವರು ನಾಲ್ಕು ತಲೆಮಾರಿನ ರಾಜಕಾರಣದ ಬಹುದೊಡ್ಡ ಕೊಂಡಿಯಾಗಿದ್ದರು. ಆರೋಗ್ಯಕರ ಮನಸ್ಸು ಕ್ರಿಯಾಶೀಲತೆಯ ಸಂಕೇತ ಎನ್ನುವ ನಿಟ್ಟಿನಲ್ಲಿ ತಮ್ಮ ಬದುಕಿನ ಕೊನೆಯ ಉಸಿರಿರುವವರೆಗೂ ಸಂಸ್ಕಾರ ಹಾಗೂ ಸುಸಂಸ್ಕೃತ ನಡವಳಿಕೆ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ತಮ್ಮ ಇಡೀ ರಾಜಕಾರಣದ ಜೀವನದಲ್ಲಿ ಕಪ್ಪು ಕಲೆಯನ್ನು ಎಂದೂ ಅಂಟಿಸಿಕೊಳ್ಳದ ಕೃಷ್ಣ ಪರಿಶುಭ್ರತೆಗೆ ಮಾದರಿಯಾದವರು. ಕರ್ನಾಟಕದ ರಾಜಕಾರಣದಲ್ಲಿ ಕೃಷ್ಣರಿಗೆ ಕೃಷ್ಣರೇ ಸಾಟಿ ಅವರಿಲ್ಲದ ಕರುನಾಡು ನೆನೆಸಿಕೊಳ್ಳುವುದು ಅತ್ಯಂತ ಕಷ್ಟಕರ, ನಮ್ಮಂತ ಯುವ ಪೀಳಿಗೆಯ ರಾಜಕಾರಣಿಗಳಿಗೆ ಅವರು ಆದರ್ಶದ ದಾರಿದೀಪ, ಅವರು ಇಹಲೋಕವನ್ನು ತ್ಯಜಿಸಿದರೂ ಅವರ ನಡೆ-ನುಡಿ ನಿತ್ಯವೂ ಜೀವಂತವಾಗಿ ರಾಜಕಾರಣದ ಆಗಸದಲ್ಲಿ ಮಿನುಗುತ್ತಿರುತ್ತದೆ ಎಂದು ವಿಜಯೇಂದ್ರ ಅವರು ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಕರ್ನಾಟಕದ ಮುಖ್ಯಮಂತ್ರಿಯಾಗಿ, ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ, ಪದ್ಮ ವಿಭೂಷಣ ಶ್ರೀ ಎಸ್.ಎಂ ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜಕಾರಣದಲ್ಲಿ ಅತ್ಯಂತ ಶಾಂತ ಸ್ವಭಾವದ, ಸಜ್ಜನ, ಹಿರಿಯ ನಾಯಕರಾಗಿದ್ದ ಅವರು ನಮಗೆಲ್ಲರಿಗೂ ಆದರ್ಶಪ್ರಾಯ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. ಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಚಂದ್ರು ಸಂತಾಪ ದೇಶದ ಧೀಮಂತ ಮುತ್ಸದ್ಧಿ, ನಾಡಿನ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನ ನನಗೆ ಅಪಾರ ನೋವು ತಂದಿದೆ. ಬೆಂಗಳೂರು ನಗರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗುರುತಾಗುವಲ್ಲಿ ಎಸ್ ಎಂ ಕೃಷ್ಣ ಅವರ ಶ್ರಮ ಅಪಾರ. ಅತ್ಯುತ್ತಮ ಆಡಳಿತಗಾರರಾಗಿದ್ದ ಸನ್ಮಾನ್ಯರು ತನ್ನ ಸನ್ನಡತೆ, ಸುಸಂಸ್ಕೃತ ವ್ಯಕ್ತಿತ್ವದಿಂದ ಸದಾ ನೆನಪಿನಲ್ಲಿ ಉಳಿಯುತ್ತಾರೆ. ಇಪ್ಪತ್ತು ವರ್ಷಗಳ ಹಿಂದೆ ಎಸ್ ಎಂ ಕೃಷ್ಣ ಅವರ ವಿರುದ್ಧ ನಾನು ಚಾಮರಾಜಪೇಟೆ ವಿಧಾನಸಭೆಯಲ್ಲಿ ಸ್ಪರ್ಧಿಸಿದ್ದೆ. ರಾಜಕೀಯವಾಗಿ ನಾವು ಬೇರೆ ಬೇರೆ ದಿಕ್ಕಿನಲ್ಲಿದ್ದರೂ ಎಸ್ ಎಂ ಕೃಷ್ಣರವರು ಒಬ್ಬ ಒಳ್ಳೆಯ ಹಿರಿಯ ಸ್ನೇಹಿತರಾಗಿದ್ದರು. ಅಗಲಿದ ಅವರ ದಿವ್ಯಾತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗ ಮತ್ತು ಅಭಿಮಾನಿ ಬಳಗಕ್ಕೆ ಈ ನೋವು ನೀಗಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಚಂದ್ರು ಅವರು ಸಂತಾಪ ಸೂಚಿಸಿದ್ದಾರೆ. ಎಸ್.ಎಂ.ಕೃಷ್ಣ ನಿಧನ: ಪ್ರಧಾನಿ ಮೋದಿ ಸಂತಾಪ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಅಸಾಧಾರಣ ನಾಯಕರಾಗಿದ್ದರು. ಸಮಾಜದ ಎಲ್ಲ ವರ್ಗಗಳ ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯಿಲ್ಲದೆ ಶ್ರಮಿಸುತ್ತಿದ್ದರು. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಅಲ್ಲದೇ ಅವರು ಓದುಗ ಮತ್ತು ಚಿಂತಕರೂ ಆಗಿದ್ದರು ಎಂದು ಸಾಮಾಜಿಕ ಜಾಲತಾಣದ ಮೂಲಕ ಪ್ರಧಾನಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಯದುವೀರ್ ಒಡೆಯರ್ ಸಂತಾಪ ಮೈಸೂರು ಮಹಾರಾಜ ಮನೆತನದ ಹಾಗೂ ಬಿಜೆಪಿ ಸಂಸದರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಎಸ್.ಎಂ.ಕೃಷ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕರ್ನಾಟಕದ ಹಿರಿಯ ರಾಜಕಾರಣಿ, ಬಿಜೆಪಿ ನಾಯಕ, ಗೌರವಾನ್ವಿತ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ಎಸ್.ಎಂ. ಕೃಷ್ಣ ಅವರು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದರು ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಸರ್ವಶಕ್ತನು ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಈ ಆಳವಾದ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ರಾಜ್ಯ ಗೃಹ ಸಚಿವರಿಂದ ಸಂತಾಪ ಸಹನಶೀಲ, ಮೇರು ವ್ಯಕ್ತಿತ್ವದ ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆಯು ವೈಯಕ್ತಿಕವಾಗಿ ನನಗೆ ನೋವನ್ನುಂಟು ಮಾಡಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಬೇಸರ ವ್ಯಕ್ತಪಡಿಸಿದರು. ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮದೇ ವ್ಯಕ್ತಿತ್ವದ ಮೂಲಕ ರಾಜ್ಯದಲ್ಲಿ ನಮ್ಮೆಲ್ಲರಿಗೂ ಆದರ್ಶವಾಗಿದ್ದರು. ಯುವಕರನ್ನು ಉತ್ತೇಜಿಸುತ್ತಿದ್ದರು. ಅವರ ರಾಜಕೀಯ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿ ಎಂದರು.

Leave a Reply

Your email address will not be published. Required fields are marked *