Bengaluru Second Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಎಎಐಗೆ ಪ್ರಸ್ತಾವನೆ

ಬೆಂಗಳೂರು || ಎಂ.ಬಿ.ಪಾಟೀಲ ಅವರಿಂದ ವರ್ಲ್ಡ್ ಬುಕ್ ರೆಕಾರ್ಡ್ಸ್ ದಾಖಲೆ ನೀಡಿ ಅಭಿನಂದನೆ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ?. ರಾಜ್ಯ ಸರ್ಕಾರದಿಂದ ಈ ಯೋಜನೆ ಕುರಿತು ಪ್ರಸ್ತಾವನೆ ಬಂದ ಬಳಿಕ ಕಾಡುತ್ತಿರುವ ಪ್ರಶ್ನೆ ಇದಾಗಿದೆ. ಸರ್ಕಾರ ಎರಡನೇ ವಿಮಾನ ನಿಲ್ದಾಣ ಯೋಜನೆ ವಿಚಾರದಲ್ಲಿ ವಿಳಂಬ ಮಾಡುತ್ತಿದೆಯೇ? ಎಂಬ ಪ್ರಶ್ನೆಯೂ ಎದ್ದಿದೆ. ಸದ್ಯ ಯೋಜನೆ ಕುರಿತು ಅಪ್‌ಡೇಟ್ ಒಂದು ಸಿಕ್ಕಿದೆ. ಸರ್ಕಾರ ಸ್ಥಳ ಅಂತಿಮಗೊಳಿಸಿದ್ದು, ಎಎಐಗೆ ಈ ವಾರದಲ್ಲಿಯೇ ಈ ಯೋಜನೆ ಕುರಿತು ವರದಿ ಸಲ್ಲಿಕೆಯಾಗಲಿದೆ.

ಮನಿ ಕಂಟ್ರೋಲ್ ಗ್ಲೋಬರ್ ಎಐ ಕಾನ್‌ಕ್ಲೇವ್ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ಎಂ. ಬಿ. ಪಾಟೀಲ ಬೆಂಗಳೂರು ನಗರದ 2ನೇ ವಿಮಾನ ನಿಲ್ದಾಣ ಯೋಜನೆ ಕುರಿತು ಮಾತನಾಡಿದ್ದಾರೆ.

ಎಂ. ಬಿ. ಪಾಟೀಲ್ ಮಾತನಾಡಿ, “ಕರ್ನಾಟಕ ಸರ್ಕಾರ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಯೋಜನೆ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ಗೆ ಈ ವಾರದಲ್ಲಿ ಪ್ರಸ್ತಾವನೆ ಸಲ್ಲಿಸಲಿದೆ” ಎಂದು ಹೇಳಿದರು. ತಮಿಳುನಾಡು ಸರ್ಕಾರ ಬೆಂಗಳೂರು ಸಮೀಪದ ಹೊಸೂರಿನಲ್ಲಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಘೋಷಣೆ ಮಾಡಿದ ಬಳಿಕ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಯೋಜನೆ ಕುರಿತು ಚರ್ಚೆಗಳು ನಡೆಯುತ್ತಿವೆ

ಎಲ್ಲಿ ವಿಮಾನ ನಿಲ್ದಾಣ ಸ್ಥಾಪನೆ?; ಸಚಿವ ಎಂ. ಬಿ. ಪಾಟೀಲ್ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗಲಿದೆ? ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ, “ಈ ವಾರ ನಾವು ಎಎಐಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಿದ್ದೇವೆ. ಬೆಂಗಳೂರಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು 2ನೇ ವಿಮಾನ ನಿಲ್ದಾಣದ ಸ್ಥಳವನ್ನು ಗುರುತಿಸಿದ್ದೇವೆ. ನಗರದ ಅಗತ್ಯ, ಐತಿಹಾಸಿಕ ಅಭಿವೃದ್ಧಿಯನ್ನು ಪರಿಗಣಿಸಿ ಸ್ಥಳವನ್ನು ಗುರುತಿಸಲಾಗಿದೆ” ಎಂದು ಸಚಿವರು ಹೇಳಿದರು

ಸದ್ಯ ಉತ್ತರದಲ್ಲಿ ನಮಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಬೆಂಗಳೂರು ನಗರದ ಶಾಸಕರಿಂದ 2ನೇ ವಿಮಾನ ನಿಲ್ದಾಣದ ಸ್ಥಳದ ಬಗ್ಗೆ ಹಲವು ಬೇಡಿಕೆ ಇದೆ. 2ನೇ ವಿಮಾನ ನಿಲ್ದಾಣ ಡಾಬಸ್‌ಪೇಟೆ, ತುಮಕೂರು, ಬಿಡದಿ, ಹಾರೋಹಳ್ಳಿಯಲ್ಲಿ ನಿರ್ಮಾಣವಾಗಬೇಕು ಎಂಬ ಬೇಡಿಕೆ ಇದೆ” ಎಂದು ಸಚಿವರು ತಿಳಿಸಿದರು.

“ಬೆಂಗಳೂರು ಉತ್ತರ ಮತ್ತು ದಕ್ಷಿಣದ ಶಾಸಕರು ಸ್ಥಳದ ಕುರಿತು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ರಾಜಕೀಯ ಒತ್ತಡಗಳಂತೆ ಸ್ಥಳ ಅಂತಿಮಗೊಳಿಸಲಾಗದು. ಬೆಂಗಳೂರು ನಗರದ ಕೈಗಾರಿಕೆ, ಜನರ ಅನುಕೂಲ ನಗರದ ಒಟ್ಟಾರೆ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸ್ಥಳವನ್ನು ಅಂತಿಮಗೊಳಿಸಬೇಕಿದೆ” ಎಂದರು.

ತಮಿಳುನಾಡು ಹೊಸೂರಿನಲ್ಲಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣದ ಸ್ಥಾಪನೆ ಕುರಿತು ಮಾಡಿರುವ ಘೋಷಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, “ಅದು ಅವರ ಹಕ್ಕು, ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ನಾವು ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಸಂಬಂಧ ಗಮನಹರಿಸಿದ್ದೇವೆ.

ಈಗಾಗಲೇ ಒಂದು ಸುಸಜ್ಜಿತ ವಿಮಾನ ನಿಲ್ದಾಣ ನಗರದಲ್ಲಿದೆ. 2ನೇ ವಿಮಾನ ನಿಲ್ದಾಣವು ಅಭಿವೃದ್ಧಿಯಾಗಲಿದೆ” ಎಂದು ಸಚಿವರು ವಿವರಿಸಿದರು.

ನಾವು ಎಚ್ಚರಿಕೆಯಿಂದ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಯೋಜನೆಯನ್ನು ಕಾರ್ಯಗತಗೊಳಿಸಲಿದ್ದೇವೆ. ಇದಕ್ಕಾಗಿ ಸ್ಥಳವನ್ನು ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮಗೊಳಿಸಲಾಗುತ್ತದೆ. ನಾನೇ ಖುದ್ದಾಗಿ ಯೋಜನೆಯ ಮೇಲ್ವಿಚಾರಣೆ ಮಾಡುತ್ತಿದ್ದೇನೆ” ಎಂದು ಸಚಿವ ಎಂ. ಬಿ. ಪಾಟೀಲ್ ಹೇಳಿದರು.

ಕೊರಟಗೆರೆಯ ಶಾಸಕರಾದ ಗೃಹ ಸಚಿವ ಡಾ. ಜಿ. ಪರಮೇಶ್ವರ ತುಮಕೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ದಕ್ಷಿಣ ಬೆಂಗಳೂರು ಎಂದು ನಾಮಕರಣವಾದ ರಾಮನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ. ಆದ್ದರಿಂದ 2ನೇ ವಿಮಾನ ನಿಲ್ದಾಣದ ಸ್ಥಳ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *