ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಫೆಬ್ರವರಿ 26ರಂದು ಮಾಂಸ ಮಾರಾಟ ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಮಾಂಸದಂಗಡಿಗಳು ಹಾಗು ಕಸಾಯಿಖಾನೆ ಮುಚ್ಚುವಂತೆ ಖಡಕ್ ಸೂಚನೆ ನೀಡಿದೆ. ಯಾರಾದರೂ ನಿಯಮ ಉಲ್ಲಂಘಿಸಿ ಪ್ರಾಣಿವಧೆ ಅಥವಾ ಮಾಂಸ ಮಾರಾಟ ಮಾಡಿದರೆ ಅವರು ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದಾಗಿ ಎಚ್ಚರಿಕೆ ನೀಡಿದೆ. ನಾಳೆ ಮಹಾಶಿವರಾತ್ರಿ ಹಬ್ಬ ಇರುವ ಕಾರಣ ಮಾಂಸ ಮಾರಾಟ ನಿಷೇಧಿಸಲಾಗಿದೆ.
ಮೊದಲೆಲ್ಲ ಗಾಂಧಿ ಜಯಂತಿ ಸೇರಿದಂತೆ ಕೆಲವು ಮಹತ್ವದ ದಿನಗಳಂದು ಮಾತ್ರವೇ ಮಾಂಸ ಮಾರಾಟ ನಿಷೇಧಿಸಲಾಗುತ್ತಿತ್ತು. ಇದೀಗ ಹಿಂದೂಗಳ ಹಬ್ಬದ ವೇಳೆಯೂ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗುತ್ತಿದೆ. ಇನ್ನು ನಾಳೆ ಮಹಾಶಿವರಾತ್ರಿ ಇರುವ ಹಿನ್ನೆಲೆ ಬಹುತೇಕರು ಪೂಜಾ ಕೈಂಕರ್ಯಗಳಲ್ಲಿ ತೊಡಗಿರುತ್ತಾರೆ. ಶಿವಭಕ್ತರು ಶಿವನ ದೇವಾಲಗಳಿಗೆ ಭೇಟಿ ನೀಡಿ ಉಪವಾಸ ಜಾಗರಣೆಯೂ ಮಾಡಲಿದ್ದಾರೆ.
ಹಾಗಾಗಿ ಹಬ್ಬ ಇರುವ ಕಾರಣ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಯಾವುದೇ ಮಾಂಸ ಮಾರಾಟ ಮಾಡದಂತೆ ನಿಷೇಧ ಹೇರಲಾಗಿದೆ. ನಾಳೆ ಒಂದು ದಿನದ ಮಟ್ಟಿಗೆ ಮಾತ್ರ ನಿರ್ಬಂಧ ಇರಲಿದೆ. ಈ ಹಿನ್ನೆಲೆ ನಾಳೆ ಕೋಳಿ, ಕುರಿ ಹಾಗೂ ಮೀನು ಸೇರಿದಂತೆ ಎಲ್ಲ ರೀತಿಯ ಮಾಂಸ ಮಾರಾಟ ಮಾಡದಂತೆ ಆದೇಶದಲ್ಲಿ ತಿಳಿಸಿದೆ.
ಯಲಹಂಕ ವಾಯುನೆಲೆಯಲ್ಲಿ ಇತ್ತೀಚೆಗೆ ನಡೆದ ಏರ್ಶೋ ವೈಮಾನಿಕ ಪ್ರದರ್ಶನದ ವೇಳೆಯೂ ಯಲಹಂಕ ಸುತ್ತ ಮುತ್ತ ಹಲವು ದಿನಗಳ ಕಾಲ ಮಾಂಸ ಮಾರಾಟ ನಿಷೇಧಿಸಿ ಯಲಹಂಕ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಆದೇಶ ಹೊರಡಿಸಿದ್ದರು. ಜನವರಿ 23ರಿಂದ ಫೆಬ್ರವರಿ 17ರವರೆಗೆ ಅಲ್ಲಿಯೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿತ್ತು.

ಇದಕ್ಕೆ ಅಲ್ಲಿನ ಸ್ಥಳೀಯರಿಂದಲೂ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ, ವಿಮಾನಗಳ ಹಾರಾಟಕ್ಕೆ ಅಡಚಣೆಯಾಗುವ ಕಾರಣದಿಂದ ಮಾಂಸ ಮಾರಾಟ ನಿಷೇಧಿಸಿರುವುದಾಗಿ ಬಿಬಿಎಂಪಿ ಹೇಳಿತ್ತು. ಇದಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದಲೂ ಖಂಡನೆ ವ್ಯಕ್ತವಾಗಿತ್ತು. ಆದರೂ ಯಲಹಂಕ ಏರ್ಪೋರ್ಸ್ ಸ್ಟೇಷನ್ನಿಂದ 13 ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿದ್ದ ಎಲ್ಲ ಮಾಂಸ ಮಾರಾಟದ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಿತ್ತು. ಇಲ್ಲಿನ ಹೋಟೆಲ್, ಡಾಬಾ, ರೆಸ್ಟೋರೆಂಟ್ಗಳಲ್ಲೂ ಮಾಂಸಾಹಾರ ತಯಾರಿಸುವುದು ಹಾಗೂ ಮಾರಾಟ ಮಾಡುವುದು ಬ್ಯಾನ್ ಆಗಿತ್ತು. ನಾಳೆ ಹಿಂದೂಗಳ ಹಬ್ಬ ಮಹಾಶಿವರಾತ್ರಿ ಆಚರಿಸುವ ಹಿನ್ನೆಲೆ ನಗರದಾದ್ಯಂತ ಮಾಂಸ ಮಾರಾಟ ನಿಷೇಧಿಸಲಾಗಿದೆ. ಸಾಮಾನ್ಯವಾಗಿ ಈ ಹಬ್ಬಕ್ಕೆ ಶಿವನ ಭಕ್ತರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಯಾವುದೇ ಬೇಯಿಸಿದ ಆಹಾರ ಸೇವಿಸುವುದಿಲ್ಲ. ದಿನವಿಡೀ ಉಪವಾಸ ಹಾಗೂ ಜಾಗರಣೆ ಮೂಲಕ ಹಬ್ಬ ಆಚರಿಸುವುದು ವಾಡಿಕೆ. ಈ ಹಿನ್ನೆಲೆ ಹಬ್ಬದ ಕಾರಣ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಿರುವುದು ನಾನ್ಪ್ರಿಯರಿಗೂ ತುಸು ಶಾಕ್ ಕೊಟ್ಟಂತಾಗಿದೆ.