ಬೆಂಗಳೂರು: ಕರ್ನಾಟಕದಲ್ಲಿ ಎಸ್.ಎಂ ಕೃಷ್ಣ ಎಂದರೆ ಕಾಂಗ್ರೆಸ್.. ಕಾಂಗ್ರೆಸ್ ಎಂದರೆ ಎಸ್.ಎಂ ಕೃಷ್ಣ ಎನ್ನುವ ಕಾಲವೊಂದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುವಲ್ಲಿ ಎಸ್.ಎಂ ಕೃಷ್ಣ ಅವರ ಪಾತ್ರ ದೊಡ್ಡದಿತ್ತು. ಅಲ್ಲದೇ ಅವರು ಆಡಳಿತ ನಡೆಸಿದ ಅವಧಿಯಲ್ಲಿ ಸವಾಲುಗಳ ಸುರಿಮಳೆಯೇ ಆಗಿತ್ತು. ಕರ್ನಾಟಕದ ಸಿ.ಎಂ ಆಗಿ ಅವರು ಅಧಿಕಾರ ನಡೆಸಿದಾಗ ಕಾವೇರಿ ವಿವಾದ ಹಾಗೂ ಡಾ. ರಾಜ್ಕುಮಾರ್ ಅಪಹರಣದಂತಹ ಗಂಭೀರ ವಿಷಯಗಳು ಇದ್ದವು. ಈ ಎಲ್ಲಾ ವಿಷಯಗಳನ್ನು ಅತ್ಯಂತ ಸಮರ್ಥವಾಗಿ ಕೃಷ್ಣ ಅವರು ನಿಭಾಯಿಸಿದ್ದರು. ಅವರು ವಿರೋಧ ಪಕ್ಷಗಳ ಮನವೊಲಿಸುವ (ವಿಧಾನಸಭೆ ಅಧಿವೇಶನ ನಡೆಯಲು) ಮಾಡುತ್ತಿದ್ದ ಪ್ರಯತ್ನಗಳನ್ನು ಕೃಷ್ಣ ಸಂಧಾನ ಎಂದೇ ಹೇಳಲಾಗುತ್ತಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಾಗೂ ಕಾಂಗ್ರೆಸ್ನ ವರ್ಚಸ್ಸನ್ನು ಕರ್ನಾಟಕದಲ್ಲಿ ಹೆಚ್ಚಿಸುವಲ್ಲಿ ಎಸ್.ಎಂ ಕೃಷ್ಣ ಅವರ ಕೊಡುಗೆ ಅಪಾರವಾಗಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ 1999ರಲ್ಲಿ ಎಸ್.ಎಂ ಕೃಷ್ಣ ಅವರು ಅಧಿಕಾರ ಸ್ವೀಕರಿಸಿದರು. ಅದೇ ವರ್ಷ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಸಹ ಇತ್ತು. ಆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವಲ್ಲಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಎಸ್.ಎಂ ಕೃಷ್ಣ ಅವರು ಯಶಸ್ವಿಯಾಗಿದ್ದರು.
ಪಾಂಚಜನ್ಯ ಯಾತ್ರೆ: ಎಸ್.ಎಂ ಕೃಷ್ಣ ಅವರು ಕರ್ನಾಟಕದಲ್ಲಿ ಪ್ರಾರಂಭಿಸಿದ ಪಾಂಚಜನ್ಯ ಯಾತ್ರೆ ಅಂದಿನ ಕಾಂಗ್ರೆಸ್ಗೆ ಮರುಹುಟ್ಟು ಅಂತಲೇ ಹೇಳಲಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಸಹ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವುದಕ್ಕೆ ಎಸ್.ಎಂ ಕೃಷ್ಣ ಅವರ ಮುಂದಾಳತ್ವಕ್ಕೆ ಪೂರ್ಣ ಸಹಕಾರ ಕೊಟ್ಟಿತ್ತು. ಈ ಯಾತ್ರೆಯ ಮೂಲಕ ಅವರು ಕಾಂಗ್ರೆಸ್ಗೆ ಶಕ್ತಿ ತುಂಬಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದು ಮಾತ್ರವಲ್ಲ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವಲ್ಲಿ ಹಾಗೂ ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ಸೃಷ್ಟಿ ಮಾಡುವ ಮೂಲಕ ಕಾಂಗ್ರೆಸ್ಗೆ ಭದ್ರ ನೆಲೆಯನ್ನು ಕಲ್ಪಿಸಿದ್ದರು. ಪಾಂಚಜನ್ಯ ಯಾತ್ರೆಯ ವೇಳೆ ಕಾಂಗ್ರೆಸ್ನಲ್ಲಿ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿದ್ದವು ನಿಜ. ಆದರೆ, ಅಂತಿಮವಾಗಿ ಆ ವರ್ಷ ನಡೆದ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಈ ಯಾತ್ರೆ ಅಂದು ಕರ್ನಾಟಕದ ಮನೆ ಮನೆ ತಲುಪಿತ್ತು ಅಂತಲೇ ಹೇಳಬಹುದು.
ಕಾಂಗ್ರೆಸ್ಗೆ ಬನ್ನಿ… ಬದಲಾವಣೆ ತನ್ನಿ ಎನ್ನುವುದು ಅಂದು ಘೋಷಾವಾಕ್ಯವಾಗಿತ್ತು. ಅಂದಿನ ಕರ್ನಾಟಕ ರಾಜಕೀಯ ಪರಿಸ್ಥಿತಿಯೂ ಗೊಂದಲಮಯವಾಗಿತ್ತು. ಇದು ಸಹ ಅಂದು ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಮನ್ನಣೆ ಸಿಗಲು ಕಾರಣವಾಯಿತು.
ಈ ಯಾತ್ರೆಯನ್ನು ನಡೆಸುವಾಗ ಎಸ್.ಎಂ ಕೃಷ್ಣ ಅವರು ಕೆಪಿಸಿಸಿಯ ಅಧ್ಯಕ್ಷರೂ ಆಗಿದ್ದರು. ಆದರೆ, ಪ್ರಾದೇಶಿಕ ಕಾಂಗ್ರೆಸ್ನಲ್ಲಿ ಈ ಯಾತ್ರೆಯ ಬಗ್ಗೆಯೂ ಅಂದು ಅಪಸ್ವರಗಳು ಎದ್ದಿದ್ದವು. ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ ಕೊಡಬೇಕು, ಒಬ್ಬ ವ್ಯಕ್ತಿಯನ್ನು ಮೆರೆಸಬಾರದು ಎಂದೆಲ್ಲ ಕೆಲವರು ಹೇಳಿದ್ದರು. ಆ ಗೊಂದಲಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕೃಷ್ಣ ಅವರ ಸಾರಥ್ಯ ದೊಡ್ಡದಿತ್ತು.