ಬೆಂಗಳೂರು: ನೆತ್ತಿ ಸುಡುವ ಬಿಸಿಲಿನಿಂದಾಗಿ ಬೆಂಗಳೂರಿನ ಜನ ಹೈರಾಣಾಗಿ ಹೋಗಿದ್ದರು. ಈಗ ಬೆಂಗಳೂರಿಗೆ ವರುಣನ ಸಿಂಚನ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಧಾರಾಕಾರವಾಗಿ ಮಳೆಯಾಗಿದ್ದು ಸಿಲಿಕಾನ್ ಸಿಟಿ ಕೂಲ್ ಆಗಿದೆ. ಅಲ್ಲದೆ ಪ್ರತೀ ಬಾರಿಯಂತೆ ರಸ್ತೆಗಳು, ಚರಂಡಿಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಜನಜೀವನ ಅಸ್ತವ್ಯವಸ್ಥಗೊಂಡಿದೆ. ಆದರೆ ಈ ಬಾರಿ ಮಳೆಗೆ ಹೊಸ ಸಮಸ್ಯೆಯೊಂದು ಸೇರ್ಪಡೆಯಾಗಿದೆ.

ಹೌದು ಬೆಂಗಳೂರಿನಲ್ಲಿ ಮಳೆಯಿಂದಾಗಿ ನಮ್ಮ ಮೆಟ್ರೋ ಮೇಲ್ಛಾವಣಿ ಸೋರುತ್ತಿರುವುದು ಕಂಡು ಬಂದಿದೆ. ಗೋಡೆಯಿಂದ ನೀರು ಜಿನುಗುತ್ತಿರುವುದರಿಂದ ಪ್ರಯಾಣಿಕರಿಗೆ ಆತಂಕ ಶುರುವಾಗಿದೆ. ವಿಶೇಷವಾಗಿ ಸುರಂಗದಲ್ಲಿರುವ ನಿಲ್ದಾಣಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ.
ಸಾಮಾನ್ಯವಾಗಿ ಮೆಟ್ರೋ ಸ್ಟೇಷನ್ನಲ್ಲಿ ಇಂತಹ ಸಮಸ್ಯೆಗಳು ಇರುವುದಿಲ್ಲ. ಆದರೆ ಮಳೆಯಾದರೆ ಸಾಕು ಮೆಟ್ರೋ ನಿಲ್ದಾಣಗಳು ಸೋರಲು ಆರಂಭವಾಗುತ್ತವೆ. ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಸುರಂಗದಲ್ಲಿ ಮಾತ್ರವಲ್ಲದೆ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಟಿಕೆಟ್ ಕೌಂಟರ್ ಬಳಿ ಮಳೆ ನೀರು ಸೋರುತ್ತಿರುವ ದೃಶ್ಯಗಳು ಕಂಡು ಬಂದಿವೆ. ಇದನ್ನು ತಡೆಯುವ ಉದ್ದೇಶದಿಂದ ಹಸಿರು ಮತ್ತು ನೇರಳೆ ಮಾರ್ಗದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ವಾಟರ್ ಪ್ರೂಫಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಬಿಎಂಆರ್ಸಿಎಲ್ ನಿರ್ಧರಿಸಿದೆ. ಈ ಕಾಮಗಾರಿ ಮುಗಿಸಲು ಬಿಎಂಆರ್ಸಿಎಲ್ ಬರೋಬ್ಬರಿ ಒಂದು ವರ್ಷ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಬಿಎಂಆರ್ಸಿಎಲ್ ಟೆಂಡರ್ ಕರೆದಿದೆ. ಟೆಂಡರ್ ಅಂತಿಮವಾಗಲು ಜೂನ್ ತನಕ ಸಮಯ ನೀಡಲಾಗಿದೆ. ಜೂನ್ ವೇಳೆಗೆ ಮಳೆಗಾಲ ಆರಂಭವಾಗುವುದರಿಂದ ಈ ವರ್ಷ ಮಳೆ ನೀರು ಸೋರುವುದನ್ನು ತಡೆಯುವುದು ಕಷ್ಟವಾಗಲಿದೆ.
ಮೆಟ್ರೋ ನಿಲ್ದಾಣದಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಪ್ರಯಾಣಿಕರಿಗೆ ಕಷ್ಟವಾಗಿದೆ. ಸುರಂಗ ಮಾರ್ಗದಲ್ಲಿ ಗೋಡೆಯಲ್ಲಿ ಸಿಮೆಂಟ್ ಹಾಕಿ ಸಣ್ಣ ರಂಧ್ರಗಳನ್ನು ಮುಚ್ಚಿದ್ದರೂ ಕೂಡ ಮಳೆ ನೀರು ಸೋರುವುದು ಮಾತ್ರ ನಿಂತಿಲ್ಲ. ಪ್ರಯಾಣಿಕರು ಜಾರಿ ಬಿದ್ದಿರುವ ಘಟನೆಗಳು ನಡೆಯುತ್ತಿವೆ. ಹೀಗಾಗಿ ಹಸಿರು ಮಾರ್ಗ ಚಿಕ್ಕಪೇಟೆ ಮತ್ತು ಕೆಆರ್ ಮಾರುಕಟ್ಟೆ ಮೆಟ್ರೋ ನಿಲ್ದಾಣ ಹಾಗೂ ನೇರಳ ಮಾರ್ಗದ ಬೈಯ್ಯಪ್ಪನಹಳ್ಳಿ- ಮಹತ್ಮಾ ಗಾಂಧಿ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ ಚಲ್ಲಘಟ್ಟ ಮತ್ತಿತರ ಕಡೆಗಳಲ್ಲಿ ನೀರು ಸೋರಿಕೆ ತಡೆಯುವುದಕ್ಕೆ ಯೋಜನೆ ರೂಪಿಸಲಾಗಿದೆ. ಮಳೆಗಾಲ ಆರಂಭವಾದಾಗಲೇ ಕಾಮಗಾರಿ ನೆನಪಿಗೆ ಬರುತ್ತಾ? ಮಳೆಯಾಗುವ ಸಂದರ್ಭದಲ್ಲಿ ಕಾಮಗಾರಿಗಳ ಬಗ್ಗೆ ಬಿಎಂಆರ್ಸಿಎಲ್ ಎಚ್ಚರಗೊಳ್ಳುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಆರಂಭವಾಗುವ ಈ ಹೊತ್ತಿನಲ್ಲಿ ಮೆಟ್ರೋ ನೀರು ಸೋರಿಕೆ ಕಾಮಗಾರಿ ನೆನಪಿಗೆ ಬರುತ್ತಾ ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ನೀರು ಸೋರಿಕೆ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಈ ಸಮಸ್ಯೆ ಮೊದಲಿನಿಂದಲೂ ಇದೆ. ಆದರೆ ಮಳೆಗಾಲದಲ್ಲೇ ಬಿಎಂಆರ್ಸಿಎಲ್ ಪ್ರಯಾಣಿಕರ ಕಣ್ಣೊರೆಸಲು ಯೋಜನೆ ರೂಪಿಸಿ ಆ ಸಮಯವನ್ನು ದೂಡುತ್ತಿದೆ. ಇಷ್ಟು ದಿನ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿಲ್ಲ ಯಾಕೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಇಂದು ಮಳೆಯಾಗಿದೆ. ಮೆಟ್ರೋ ನಿಲ್ದಾಣ ಸೋರುತ್ತಿದೆ. ಹೀಗಾಗಿ ಜನ ಉಗಿಯುತ್ತಾರೆ ಎನ್ನುವ ಭಯದಿಂದ ಯೋಜನೆ ಮಾಡಿದ್ದೇವೆ ಎಂದು ತೋರಿಸಿಕೊಳ್ಳಲು ಇದೆಲ್ಲಾ ಹೇಳುತ್ತಿದ್ದಾರೆ. ಮೆಟ್ರೋ ನಿಲ್ದಾಣ ಸೋರುವ ಸಮಸ್ಯೆ ಇಂದಿನದ್ದಲ್ಲ. ಇಷ್ಟು ದಿನ ಬಿಎಂಆರ್ಸಿಎಲ್ ಏನು ಮಾಡುತ್ತಿತ್ತು ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.