ಬೆಂಗಳೂರು: 2024-25ನೇ ಹಣಕಾಸು ವರ್ಷದ ಬಾಕಿ ಆಸ್ತಿ ತೆರಿಗೆಗಳ ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಎಲ್ಲಾ ವಲಯ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೂಚನೆ ನೀಡಿದೆ.

5,210 ಕೋಟಿ ರೂ. ಗುರಿ ಪೈಕಿ 4,604 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದ್ದು, ನಿಗದಿತ ಗುರಿಯ ಶೇ. 88.36 ರಷ್ಟು ತಲುಪಲಾಗಿದೆ. ಬಾಕಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಆಯಾ ವಲಯಗಳಲ್ಲಿನ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಸಂಗ್ರಹಿಸಬೇಕೆಂದು ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಹಣಕಾಸು ವರ್ಷ ಮುಗಿಯಲು ಕೇವಲ ಎರಡು ವಾರಗಳು ಬಾಕಿ ಇದ್ದು, ಇನ್ನೂ 606 ಕೋಟಿ ರೂ.ಗಳನ್ನು ಸಂಗ್ರಹಸಬೇಕಿದೆ. ಹೆಚ್ಚಿನ ಆಸ್ತಿ ತೆರಿಗೆ ಬಾಕಿ ಹೊಂದಿರುವ ಕಂಪನಿಗಳು ಮತ್ತು ವಾಣಿಜ್ಯ ಆಸ್ತಿಗಳಿಗೆ ಭೇಟಿ ನೀಡಿ ಅವುಗಳನ್ನು ಸಂಗ್ರಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ, ತಿಂಗಳ ಅಂತ್ಯದ ವೇಳೆಗೆ ಬಿಬಿಎಂಪಿ ನಿಗದಿಪಡಿಸಿದ ಗುರಿಯನ್ನು ತಲುಪುವಂತೆ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ.
ಎಂಟು ಬಿಬಿಎಂಪಿ ವಲಯಗಳಲ್ಲಿ, ಯಲಹಂಕ ವಲಯವು ಶೇ. 99.97 ರಷ್ಟು ಆಸ್ತಿ ತೆರಿಗೆ ಸಂಗ್ರಹದೊಂದಿಗೆ ಅಗ್ರಸ್ಥಾನದಲ್ಲಿದ್ದು, ಯಲಹಂಕದಲ್ಲಿ 445.24 ಕೋಟಿ ರೂ. ಪೈಕಿ 445.15 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ.