ಬೆಂಗಳೂರು : ಕುರಿ ಮತ್ತು ಉಣ್ಣೆ ಆಭಿವೃದ್ದಿ ನಿಗಮದ ವತಿಯಿಂದ ರಾಜ್ಯದಲ್ಲೇ ಮೊದಲ ಬಾರಿಗೆ ತುಮಕೂರಿನ ಶಿರಾದಲ್ಲಿ ಸುಸಜ್ಜಿತ ಆತ್ಯಾಧುನಿಕ ವಧಾಗಾರ ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಇಂದು ವಿಧಾನಪರಿಷತ್ನಲ್ಲಿ ಮಾತನಾಡಿದ ಸಚಿವರು, ಶಿರಾ ತಾಲೂಕಿನ ಚೀಲನಹಳ್ಳಿ ಬಳಿ 20 ಎಕರೆಯಲ್ಲಿ ನಿರ್ಮಾಣಗೊಂಡಿರುವ ಆಧುನಿಕ ಸಂಸ್ಕರಣಾ ಕೇಂದ್ರ (ವಧಾಗಾರ) ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ. ಇದರ ನಿರ್ಮಾಣಕ್ಕಾಗಿ ಮೀಸಲಿರಿಸಿದ್ದ ಅಂದಾಜು ಮೊತ್ತದಲ್ಲಿ 44.63 ಕೋಟಿ ಪೈಕಿ 26,56 ಕೋಟಿ ರೂ. ಸಿವಿಲ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಯಂತ್ರೋಪಕರಣ ಅಳವಡಿಸಲಾಗಿದೆ. ಒಮ್ಮೆ ಕಾರ್ಯಾರಂಭಗೊಂಡರೆ ವೈಜ್ಞಾನಿಕ ಹಾಗೂ ಗುಣಮಟ್ಟ ರೀತಿ ವಧೆಕಾರ್ಯ ಮಾಡಬಹುದಾಗಿದೆ ಎಂದು ಬಿಜೆಪಿ ಸದಸ್ಯ ಚಿದಾನಂದ್ ಎಂ. ಗೌಡ ಅವರ ಪ್ರಶ್ನೆಗೆ ಪಶುಸಂಗೋಪನೆ ಸಚಿವರ ಪರವಾಗಿ ಕಂದಾಯ ಸಚಿವರು ಉತ್ತರಿಸಿದರು.
ರಾಜ್ಯದಲ್ಲಿಯೇ ಮೊದಲ ವಧಾಗಾರ : ಶಿರಾ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 4,78,500 ಕುರಿ ಹಾಗೂ ವಿಜಯಪುರದ ಇಂಡಿ ತಾಲೂಕಿನಲ್ಲಿ 1,61,129 ಮೇಕೆಗಳಿವೆ. ವಧಾಗಾರ ಕಾರ್ಯಾರಂಭಗೊಂಡ ಬಳಿಕ ಪ್ರತಿದಿನ 1,500 ಕುರಿ ಅಥವಾ ಮೇಕೆಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ರಪ್ತು ಮಾಡಬಹುದು. ಇದರಿಂರ 150 ರಿಂದ 200 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಈ ವಧಾಗಾರ ಆರಂಭಿಸಲಾಗುತ್ತಿದೆ. ಇದರ ಸಾಧಕ-ಬಾಧಕ ಅರಿತು ಹೆಚ್ಚಿನ ಸಂಖ್ಯೆಯಲ್ಲಿ ವಧಾಗಾರ ಘಟಕ ನಿರ್ಮಾಣದ ಬಗ್ಗೆ ಚಿಂತಿಸಲಾಗುವುದು ಎಂದು ಅವರು ತಿಳಿಸಿದರು.
ಶಿರಾ ತಾಲೂಕಿನಲ್ಲಿ ಹೆಚ್ಚು ಕುರಿಗಾಯಿಗಳಿದ್ದರೂ ಇದುವರೆಗೂ 132 ಮಂದಿಗೆ ಮಾತ್ರ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕುರಿ ಸಾಗಾಣಿಕೆದಾರರಿಗೆ ಸಾಲ ನೀಡಿದರೆ ಅನುಕೂಲವಾಗಲಿದೆ ಎಂದು ಚಿದಾನಂದ್ ಅವರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಶಿರಾ ಭಾಗದ ಕುರಿಗಾಹಿಗಳಿಗೆ ವಿಶೇಷ ಆದ್ಯತೆ ಮೇರೆಗೆ ಹೆಚ್ವಿನ ಸಾಲ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಅದೇ ರೀತಿ ಒಟ್ಟಾರೆ ಕೃಷಿ ವಲಯದಲ್ಲಿ ಕುರಿ ಸಾಗಾಣಿಕೆ ಮಾಡಿದರೆ ಹೆಚ್ಚು ಲಾಭದಾಯಕವಾಗಲಿದೆ. ವಧಾಗಾರ ನಿರ್ಮಾಣದಿಂದ ವೈಜ್ಞಾನಿಕ ಹಾಗೂ ಗುಣಮಟ್ಟದ ಮಾಂಸ ರಫ್ತು ಮಾರುಕಟ್ಟೆ ವಿಸ್ತರಣೆಗೆ ನೆರವಾಗಲಿದೆ ಎಂದು ಹೇಳಿದರು.
ಕುರಿ ಸಾಕಾಣಿಕೆದಾರರ ಮೇಲೆ ಹಲ್ಲೆ, ಆತ್ಯಾಚಾರ ನಡೆದರೆ ಕ್ರಮ ಕೈಗೊಳ್ಳಲು ಸೂಕ್ತ ಕಾನೂನು ಮಾಡುವ ಪ್ರಕ್ರಿಯೆಯು ಸರ್ಕಾರದ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕಾನೂನು ಜಾರಿಗೆ ತರಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.