ಬೆಂಗಳೂರು: ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದ್ದು ಕೆಲ ಕಿಡಿಗೇಡಿಗಳು ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ವಿದ್ಯಾರ್ಥಿಗಳ ಬಾಳಲ್ಲಿ ಆಟವಾಡುತ್ತಿದ್ದಾರೆ. ಎಸ್ಎಸ್ಎಸ್ಸಿ ಪ್ರಶ್ನೆ ಪತ್ರಿಕೆ ಎಂದು ಹೇಳುವ ನಕಲಿ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಾಗುತ್ತಿದೆ. ಈ ಘಟನೆಯಿಂದ ವಿದ್ಯಾರ್ಥಿಗಳು ದಾರಿತಪ್ಪುವ ಭೀತಿ ಪೋಷಕರಿಗೆ ಎದುರಾಗಿದೆ.

ಹೌದು… ರಾಜ್ಯದಲ್ಲಿ ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಿವೆ. ಇದೇ ಸಮಯವನ್ನು ಬಂಡವಾಳವಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಪ್ರಶ್ನೆ ಪತ್ರಿಕೆಗಳನ್ನು ವೈರಲ್ ಮಾಡಲಾಗುತ್ತಿದೆ. ಈ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಅಸಲಿ ಎಂದು ಶೇರ್ ಮಾಡಲಾಗುತ್ತಿದೆ. ಈ ಪ್ರಶ್ನೆ ಪತ್ರಿಯನ್ನೇ ಅಸಲಿ ಎಂದುಕೊಂಡು ವಿದ್ಯಾರ್ಥಿಗಳು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಇಷ್ಟೆಲ್ಲಾ ಆದರೂ ಕೂಡ ಶಿಕ್ಷಣ ಇಲಾಖೆ ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿದೆ.
ಇದರ ಹಿಂದೆ ಯಾರಿದ್ದಾರೆ? ಯಾಕಾಗಿ ಹೀಗೆ ಮಾಡುತ್ತಿದ್ದಾರೆ ಅನ್ನೋದನ್ನು ಪತ್ತೆ ಹಚ್ಚುವ ಕಾರ್ಯ ಯಾರೂ ಕೂಡ ಮಾಡುತ್ತಿಲ್ಲ. ಪ್ರತಿ ನಿತ್ಯಾ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಎಂದು ಹೇಳುವ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕೆಲ ಕಿಡಿಗೇಡಿಗಳು ಈ ಪ್ರಶ್ನೆ ಪತ್ರಿಕೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.
ಕಳೆದ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಎಡಿಟ್ ಮಾಡಿ ಈ ವರ್ಷದ ಪ್ರಶ್ನೆ ಪತ್ರಿಕೆ ಎಂದು ಸುಳ್ಳು ಹೇಳುತ್ತಿರುವ ಕಿಡಿಗೇಡಿಗಳು ಹಣ ಕೊಟ್ಟರೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷಾ ಒಡ್ಡುತ್ತಿದ್ದಾರೆ. ಇದರಿಂದಾಗಿ ಕೆಲವರು ಈ ಪತ್ರಿಕೆ ಅಸಲಿ ಎಂದು ಭಾವಿಸಿ ದುಡ್ಡು ಕೊಟ್ಟು ಪ್ರಶ್ನೆ ಪತ್ರಿಕೆ ಪಡೆಯುತ್ತಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ ಈ ಪ್ರಶ್ನೆ ಪತ್ರಿಕೆಗಳನ್ನು ಪಡೆದು ಕೆಲ ಓದುವ ವಿದ್ಯಾರ್ಥಿಗಳು ಪರೀಕ್ಷೆಗೆ ಓದದೆ ಮೋಸ ಹೋಗುತ್ತಿದ್ದಾರೆ. ಇದೇ ಪ್ರಶ್ನೆ ಪತ್ರಿಕೆ ನೀಡುತ್ತಾರೆಂದು ಭಾವಿಸಿ ಪರೀಕ್ಷಾ ಕೇಂದ್ರದಲ್ಲಿ ಹೋದಾಗ ಇದು ಅಸಲಿ ಅಲ್ಲ ನಕಲಿ ಎಂದು ತಿಳಿದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್ ಹೇಳಿದ್ದಾರೆ.
ಇಲ್ಲಿ ಗಮನಸಬೇಕಾದ ವಿಷಯ ಅಂದರೆ ಹಲವಾರು ಶಾಲೆಗಳು ಸಾಮಾಜಿಕ ಜಾಲತಾಣದಲ್ಲಿ ನಕಲಿ ಪ್ರಶ್ನೆ ಪತ್ರಿಕೆ ಎಡಿಟ್ ಮಾಡಿ ವೈರಲ್ ಮಾಡುತ್ತಿರುವ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ನೀಡಿದರೂ ಕೂಡ ಈವರೆಗೂ ಪ್ರಯೋಜನವಾಗಿಲ್ಲ. ಕಿಡಿಗೇಡಿಗಳು ಕಿಡಿ ಹೊತ್ತಿಸುವಂತಹ ಕೆಲಸ ಮಾಡಿ ವಿದ್ಯಾರ್ಥಿಗಳ ಬಾಳಲ್ಲಿ ಆಟವಾಡುತ್ತಿದ್ದಾರೆ. ಆದರೂ ಕೂಡ ಶಿಕ್ಷಣ ಇಲಾಖೆ ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಇದರಿಂದ ಚೆನ್ನಾಗಿ ಓದುವ ಮಕ್ಕಳೂ ಕೂಡ ಗಾಬರಿಗೊಳ್ಳುವುದು ಕಂಡುಬರುತ್ತಿದೆ. ಇಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವರಿಗೂ ಪೋಷಕರು ಹಾಗೂ ಶಿಕ್ಷಕರು ಪತ್ರ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಕಿಡಿಗೇಡಿಗಳ ಕಿಡಿಗೇಡಿತನಕ್ಕೆ ಬ್ರೇಕ್ ಬೀಳುತ್ತಾ ಕಾದು ನೊಡಬೇಕಿದೆ.