ಬೆಂಗಳೂರು: ರಾಜ್ಯ ರಾಜಧಾನಿಯ ಬೆಂಗಳೂರು ತಾಪಮಾನಕ್ಕೆ ಕೆಂಡದಂತೆ ಕಾಯುತ್ತಿದೆ. ವಾಡಿಕೆ ತಾಪಮಾನಕ್ಕಿಂತ ಹೆಚ್ಚಿನ ಉಷ್ಣಾಂಶ ನಗರದಲ್ಲಿ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನವು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚೇ ದಾಖಲಾಗುತ್ತಿದೆ. ಇದು ಈ ವರ್ಷದ ಫೆಬ್ರವರಿಯ ಗರಿಷ್ಠ ತಾಪಮಾನ ಎನ್ನಲಾಗಿದೆ. ಮುಂದಿನ ದಿನಗಳು ನಗರದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಹಗಲು ಹೊತ್ತಿನಲ್ಲಿ ಗರಿಷ್ಠ ತಾಪಮಾನ 32.8 ಡಿಗ್ರಿ ಸೆಲ್ಸಿಯಸ್ಗೆ ಹೆಚ್ಚಾಗಿದೆ. ಇದು ವಾಡಿಕೆಗಿಂತ ನಿರೀಕ್ಷೆ ಒಂದು ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ಕನಿಷ್ಠ ತಾಪಮಾನವು 19.7 ಡಿಗ್ರಿ ಸೆಲ್ಸಿಯಸ್ನಲ್ಲಿ ದಾಖಲಾಗಿದೆ. ನಗರದಲ್ಲಿ ರಾತ್ರಿ ಸೆಕೆಯ ವಾತಾವರಣ ಶುರುವಾಗಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಆಗಾಗ ಮಳೆ ಕಂಡು ಬಂದರೆ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಅತ್ಯಧಿಕ ಸೆಕೆ, ಒಣಹವೆ ಸೃಷ್ಟಿಯಾಗಿದೆ.
ಬೆಂಗಳೂರಿನಲ್ಲಿ ಸರಾಸರಿಗಿಂತ 1.3 ಡಿಗ್ರಿ ಸೆಲ್ಸಿಯಸ್ ಬಿಸಿಲು ಹೆಚ್ಚಾಗಿದೆ. ಮಳೆ ಇಲ್ಲದೇ ನಗರದ ನೆಲ ಒಣಗಿದೆ. ಕಾಂಕ್ರೀಟ್ ರಸ್ತೆಗಳ ಮೇಲಿಂದ ಬಿಸಿಲ ಝಳ ಹೊಮ್ಮುತ್ತಿದೆ. ವಾಹನ ಸವಾರರು ಸೇರಿದಂತೆ ಬೆಂಗಳೂರು ನಿವಾಸಿಗಳು ತತ್ತರಿಸುತ್ತಿದ್ದಾರೆ. ಸದ್ಯ ಬೆಂಗಳೂರಿನ ವಾತಾವರಣದಲ್ಲಿನ (ಗಾಳಿ) ತೇವಾಂಶ ಮಟ್ಟವು ಏರಿಳಿತದ ಬಳಿಕ ಸೋಮವಾರ ಬೆಳಗ್ಗೆ 64ರಷ್ಟಿತ್ತು. ಸಂಜೆಗೆ ಅದು 22ಕ್ಕೆ ಇಳಿಕೆ ಆಗಿದೆ.
10 ದಿನಗಳ ಬೆಂಗಳೂರು ಹವಾಮಾನ ಮುನ್ಸೂಚನೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ನಗರದಲ್ಲಿ ಮುಂದಿನ ಎರಡು ದಿನಗಳವರೆಗೆ ಮಂಜು ಮುಸುಕಿದ ಬೆಳಗಿನ ವಾತಾವರಣ ಕಂಡು ಬರಲಿದೆ. ಅಲ್ಲಲ್ಲಿ ಮಂಜು ಕವಿದ ವಾತವರಣ ಜೊತೆಗೆ ಗರಿಷ್ಠ 33 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ.
ನೀಲಿ ಆಕಾಶ ಸ್ಪಷ್ಟವಾಗಿರಲಿದ್ದು, ಉಷ್ಣಾಂಶ-ಒಣಹವೆಯು ಹೆಚ್ಚಾಗಲಿದೆ. ಫೆಬ್ರವರಿ 28 ಮತ್ತು ಮಾರ್ಚ್ 1 ರ ವೇಳೆಗೆ ಭಾಗಶಃ ಮೋಡ ಕವಿದ ಸ್ಥಿತಿಗೆ ಪರಿವರ್ತನೆಗೊಳ್ಳುವು ಸಂಭವವು ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಮುಂದಿನ ನಾಲ್ಕು ದಿನಗಳ ಬಳಿಕ ನಂತರದ ಹತ್ತು ದಿನಗಳವರೆಗೆ ಗರಿಷ್ಠ ತಾಪಮಾನ ಏರುಗತಿಯಲ್ಲಿ ಸಾಲಿದೆ. ಸಂಜೆ, ರಾತ್ರಿ ತಂಪು ವಾತಾವರಣ ಕಳೆದು, ತೀವ್ರವಾದ ಬಿಸಿ ಇಲ್ಲವೇ ಸೆಕೆಯ ವಾತಾವರಣ ಕಂಡು ಬರಲಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನ ವಾತಾವರಣ: ಹೆಚ್ಚಿನ ಮಾಹಿತಿ ಪ್ರತಿ ನಿತ್ಯ ಸಂಜೆ 6:27 ಕ್ಕೆ ಸೂರ್ಯಾಸ್ತವಾಗಲಿದೆ. ಬೆಳಗ್ಗೆ 6:39 ಗಂಟೆಗೆ ಸೂರ್ಯೋದಯ ಆಗುವ ನಿರೀಕ್ಷೆ ಇದೆ. ಚಂದ್ರ ಬೆಳಗಿನ ಜಾವ 2:31ಕ್ಕೆ ಚಂದ್ರ ಉದಯವಾಗಲಿದ್ದಾನೆ. ತಂಪಾದ ರಾತ್ರಿಗಳು ಮತ್ತು ಮುಂಜಾನೆಯ ಮಂಜು ಹೆಚ್ಚಿರಲಿದೆ. ಕೆಲವು ಬೆಳಗ್ಗೆ ಮತ್ತು ರಾತ್ರಿಗಳು ತಂಪಿನಿಂದ ಕೂಡಿರುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಶಾಖದ ಪ್ರಮಾಣ ಹೆಚ್ಚಾಗುತ್ತಿದೆ. ಉರಿ ಬಿಸಲಿನಿಂದ ಜನರು ಹೈರಾಣಾಗುತ್ತಿದ್ದಾರೆ. ಆದ್ದರಿಂದ ಬಿಸಿಲು ಹೆಚ್ಚಾಗುವ ಬೆಳಗ್ಗೆ 10 ಹೊತ್ತಿಗೆ ಹೊರಗಿನ ಕೆಲಸ ಸಾಧ್ಯವಾದಷ್ಟು ಮುಗಿಸಬೇಕು. ಸಂಜೆ 4ಗಂಟೆ ನಂತರ ಹೊರಾಂಗಣ ಕೆಲಸ ಮಾಡಲು ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕು. ಈ ಮಧ್ಯದ ಸಮಯದಲ್ಲಿ ಒಣ ಹವೆ ಕಾರಣಕ್ಕೆ ಹೊರಾಂಗಣ ಪ್ರವೇಶಿದಂತೆ ತಜ್ಞರು ಸಲಹೆ ನೀಡಿದ್ದಾರೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಹೆಚ್ಚಾಗಿ ನೀರು ಕುಡಿಯಬೇಕು. ಆರೋಗ್ಯ ಕಾಳಜಿ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.