ಬೆಂಗಳೂರು: ಕರ್ನಾಟಕದ ಮತ್ತೊಂದು ಬ್ಯಾಂಕ್ ವಿಲೀನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಪ್ಪಿಗೆ ನೀಡಿದೆ. ಜನವರಿ 6ರ ಸೋಮವಾರದಿಂದಲೇ ಜಾರಿಗೆ ಬರುವಂತೆ ಬೆಂಗಳೂರು ನಗರದ ಬ್ಯಾಂಕ್ ಮಹಾರಾಷ್ಟ್ರದ ಪುಣೆ ಮೂಲದ ಕಾಮೋಸ್ ಕೋ ಆಪರೇಟಿವ್ ಬ್ಯಾಂಕ್ನೊಂದಿಗೆ ವಿಲೀನವಾಗಲಿದೆ. ಈಗಾಗಲೇ ಈ ಬಗ್ಗೆ ಬ್ಯಾಂಕ್ನ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರು ನಗರದಲ್ಲಿರುವ 10ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ದಿ. ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮಹಾರಾಷ್ಟ್ರದ ಕಾಮೋಸ್ ಕೋ ಆಪರೇಟಿವ್ ಬ್ಯಾಂಕ್ನೊಂದಿಗೆ ವಿಲೀನವಾಗಲಿದೆ. ಜನವರಿ 6ರಿಂದಲೇ ಇದು ಜಾರಿಗೆ ಬರಲಿದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ಹೇಳಿದೆ.
ದಿ. ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವಿಲೀನದೊಂದಿಗೆ ಕಾಮೋಸ್ ಕೋ ಆಪರೇಟಿವ್ ಬ್ಯಾಂಕ್ನೊಂದಿಗೆ 18 ಸಹಕಾರಿ ಬ್ಯಾಂಕುಗಳು ವಿಲೀನವಾದಂತೆ ಆಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಹ ಬ್ಯಾಂಕ್ ವಿಲೀನದ ಆದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬ್ಯಾಂಕ್ ವಿಲೀನಕ್ಕೆ ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತೇಜಸ್ವಿ ಸೂರ್ಯ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಾವಿರಾರು ಮಧ್ಯಮ ವರ್ಗದ ಠೇವಣಿದಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
13 ಶಾಖೆಗಳಿವೆ: ಜನವರಿ 6 ರಿಂದಲೇ ಅನ್ವಯವಾಗುವಂತೆ ಬೆಂಗಳೂರು ನಗರದ ದಿ. ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಕಾಮೋಸ್ ಕೋ ಆಪರೇಟಿವ್ ಬ್ಯಾಂಕ್ ಆಗಿ ಕಾರ್ಯ ನಿರ್ವಹಣೆ ಮಾಡಲಿದೆ. ದಿ. ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಬೆಂಗಳೂರು ನಗರದಲ್ಲಿ 12 ಮತ್ತು ಮೈಸೂರಿನಲ್ಲಿ 1 ಸೇರಿ ಒಟ್ಟು 13 ಶಾಖೆಗಳನ್ನು ಒಳಗೊಂಡಿದೆ. 2024ರ ಆಗಸ್ಟ್ ಮಾಹಿತಿ ಪ್ರಕಾರ ಬ್ಯಾಂಕ್ 1393 ಕೋಟಿ ರೂ. ವಹಿವಾಟು ನಡೆಸಿತ್ತು.
2023ರ ಜುಲೈನಲ್ಲಿ ಆರ್ಬಿಐ ದಿ. ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮೇಲೆ ನಿರ್ಬಂಧವನ್ನು ಹೇರಿತ್ತು. ಬ್ಯಾಂಕ್ ಖಾತೆಗಳಿಂದ ಕೇವಲ 50,000 ರೂ. ವಿತ್ ಡ್ರಾ ಮಾಡಬಹುದು ಎಂದು ಹೇಳಿತ್ತು. ಬ್ಯಾಂಕ್ ಆರ್ಥಿಕ ಪರಿಸ್ಥಿತಿ ಹಿನ್ನಲೆಯಲ್ಲಿ ಈ ನಿರ್ಬಂಧ ಹೇರಿತ್ತು. ಬಳಿಕ ಅದನ್ನು ಜನವರಿ 24, 2025ರ ತನಕ ವಿಸ್ತರಣೆ ಮಾಡಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 56 ಮತ್ತು ಸೆಕ್ಷನ್ 44ಎ ಉಪ ವಿಭಾಗ (4) ಅಡಿಯಲ್ಲಿ ದಿ. ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅನ್ನು ಕಾಮೋಸ್ ಕೋ ಆಪರೇಟಿವ್ ಬ್ಯಾಂಕ್ ಜೊತೆ ವಿಲೀನ ಮಾಡಲು ಒಪ್ಪಿಗೆಯನ್ನು ಕೊಟ್ಟಿದೆ. ದಿ. ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವೆಬ್ಸೈಟ್ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲೂ ಅದರಲ್ಲೂ ದಕ್ಷಿಣ ಬೆಂಗಳೂರಿನ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡಲು ದಿ. ಟಿ. ಆರ್. ಶಾಮಣ್ಣ ಮತ್ತು ವೈ. ವಿ. ಕೇಶವಮೂರ್ತಿ ಅವರ ನೇತೃತ್ವದಲ್ಲಿ ಬ್ಯಾಂಕ್ ಸ್ಥಾಪನೆ ಮಾಡಲಾಯಿತು. ಗಾಂಧಿವಾದಿಯಾಗಿದ್ದ ಟಿ. ಆರ್. ಶಾಮಣ್ಣ ಸುಮಾರು 5 ದಶಕಗಳ ಕಾಲ ರಾಜಕಾರಣ ಮಾಡಿದವರು. ವೈ. ವಿ. ಕೇಶವಮೂರ್ತಿ ಅವರು ಸಹ ಗಾಂಧಿವಾದಿಯಾಗಿದ್ದು, ಬ್ಯಾಂಕ್ ಸ್ಥಾಪನೆಗೆ ಕೈ ಜೋಡಿಸಿದರು. ರಾಜಕೀಯ ನಾಯಕರು,
ವಾಣಿಜ್ಯೋದ್ಯಮಿಗಳು, ವೇತನದಾರರು, ಇಂಜಿನಿಯರ್ಗಳು, ಡಾಕ್ಟರ್ಗಳು, ಸಾಮಾನ್ಯ ಜನರು ಸೇರಿ 2 ಸಾವಿರ ಸದಸ್ಯರು 2 ಲಕ್ಷ ಹೂಡಿಕೆ ಮಾಡಿದರು. ಸದ್ಯ ಬ್ಯಾಂಕ್ 30,000 ಸದಸ್ಯರನ್ನು ಹೊಂದಿದೆ.