ಬೆಂಗಳೂರು : ಬೆಂಗಳೂರಿನ ಹೊರ ವಲಯದಲ್ಲಿರುವ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಹತ್ವದ ಆದೇಶ ಮಾಡಿದೆ. 110 ಹಳ್ಳಿಗಳಲ್ಲಿ ಕಾವೇರಿ ನೀರು ಪೂರೈಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳು ಆಗಿವೆ. ಇದೀಗ 110 ಹಳ್ಳಿಗಳಲ್ಲಿ ಬರುವ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ನಿರ್ದೇಶನ ನೀಡಿದ್ದಾರೆ.
ಅಲ್ಲದೆ ಬೆಂಗಳೂರಿನಲ್ಲಿ ಈ ನಿರ್ದಿಷ್ಟ ಭಾಗದಲ್ಲಿ ನೀರು ಪೂರೈಕೆ ಮಾಡುವುದಕ್ಕೆ ಟೈಮ್ ಫಿಕ್ಸ್ ಮಾಡಲಾಗುತ್ತಿದೆ. ಅಲ್ಲದೆ 11 ಹಳ್ಳಿಗಳ ವ್ಯಾಪ್ತಿಯಲ್ಲಿರುವ ಬೋರ್ವೆಲ್ಗಳನ್ನು ಪಾಲಿಕೆಯಿಂದ ಜಲಮಂಡಳಿಗೆ ಹಸ್ತಾಂತರಿಸುವುದಕ್ಕೆ ಕಾರಣವೇನು ಎನ್ನುವುದು ಸೇರಿದಂತೆ ಇದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಿಗಳಲ್ಲಿರುವ ಬೋರ್ವೆಲ್ಗಳನ್ನು ಪಾಲಿಕೆಯಿಂದ ಜಲಮಂಡಳಿಗೆ ಹಸ್ತಾಂತರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾ ತುಷಾರ್ ಗಿರಿನಾಥ್ ಅವರು ನಿರ್ದೇಶನ ನೀಡಿದ್ದಾರೆ. ಯಲಹಂಕ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಎನ್ನುವ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ 110 ಹಳ್ಳಿಗಳ ಪೈಕಿ ಥಣಿಸಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಜಲಮಂಡಳಿಯಿಂದ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಬಹುತೇಕ ಕಡೆ ಕಾವೇರಿ ನೀರಿನ ಸಂಪರ್ಕವನ್ನು ನೀಡಲಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸುವ ಸಂಬಂಧ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಫೆಬ್ರವರಿ ಅಂತ್ಯದೊಳಗಾಗಿ ನೀರು ಪೂರೈಕೆ: ಬೆಂಗಳೂರಿನ ಹೊರ ವಲಯದ ಹಾಗೂ 110 ಹಳ್ಳಿಗಳಲ್ಲಿ ನೀರು ಪೂರೈಕೆಗೆ ಆದ್ಯತೆ ಕೊಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಅವರು ನಿರ್ದೇಶನ ನೀಡಿದ್ದಾರೆ. ಥಣಿಸಂದ್ರ ಮತ್ತು ಹೆಗ್ಡೆ ನಗರಕ್ಕೆ ಕಾವೇರಿ ನೀರು ಸಂಪರ್ಕ ಕಲ್ಪಿಸಬೇಕು ಎಂದು ಜನ ಪ್ರಶ್ನೆ ಮಾಡಿದ್ದು, ಇದಕ್ಕೆ ಆಯುಕ್ತರು ಉತ್ತರಿಸಿದ್ದಾರೆ. ಕಾವೇರಿ ನೀರು ಎಲ್ಲಾ ಪ್ರದೇಶಗಳಲ್ಲೂ ಸಿಗುವಂತೆ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಟೆಸ್ಟಿಂಗ್ ನಡೆಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ನೀರು ಸೋರಿಕೆಯಾಗುವುದನ್ನು ಗುರುತಿಸಿ ಫೆಬ್ರವರಿ ಅಂತ್ಯದೊಳಗಾಗಿ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಸೂಚನೆ ನೀಡಲಾಯಿತು. ಅಲ್ಲದೆ ಈ ಪ್ರದೇಶದಲ್ಲಿ ನೀರು ಪೂರೈಕೆ ಮಾಡುವುದಕ್ಕೆ ವೇಳಾ ಪಟ್ಟಿ ಹಾಕಿಕೊಳ್ಳಬೇಕು ಹಾಗೂ ಆ ಸಮಯದಲ್ಲಿ ನೀರು ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಇನ್ನು ಈ ಭಾಗದಲ್ಲಿರುವ ರಾಜಕಾಲುವೆಗೆ ಸಂಬಂಧಿಸಿದಂತೆಯೂ ಮಹತ್ವದ ಸೂಚನೆಯನ್ನು ನೀಡಲಾಗಿದೆ. ಬ್ಯಾಟರಾಯನಪುರದಲ್ಲಿ ಸುಮಾರು 13 ಕಿ.ಮೀ ಕಚ್ಚಾ ಡ್ರೈನ್ ಬರಲಿದೆ. ಅದರಲ್ಲಿ ಒಂದು ಬಾರಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಲು ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ. ಹಕ್ಕುಪತ್ರ ನೀಡಲು ನಿರ್ದೇಶನ: ಬೆಂಗಳೂರಿನ ದೊಡ್ಡಬೆಟ್ಟಹಳ್ಳಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಯೋಜನೆಯಡಿ 30 ಜನರಿಗೆ ಹಕ್ಕುಪತ್ರ ನೀಡಬೇಕಿದೆ. ಆದರೆ, ಈವರೆಗೆ 17 ಜನರಿಗೆ ಮಾತ್ರ ನೀಡಲಾಗಿದೆ. ಇನ್ನೂ 13 ಮಂದಿಗೆ ಹಕ್ಕುಪತ್ರ ನೀಡಬೇಕಿದೆ. ಈ ಪೈಕಿ ಹಕ್ಕು ಪತ್ರ ನೀಡಲು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. 17 ದೂರುಗಳ ಸ್ವೀಕಾರ: ಇನ್ನು ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಳೆದ ಬಾರಿ ನಡೆದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದಂತಹ ಬಹುತೇಕ ದೂರುಗಳನ್ನು ಪರಿಹರಿಸಲಾಗಿದೆ. ಮಂಗಳವಾರ ಸಹ 17 ದೂರುಗಳನ್ನು ಸ್ವೀಕರಿಸಲಾಗಿದೆ. ಅಲ್ಲದೆ ಈ ಹೊಸ ದೂರುಗಳನ್ನು ಕಾಲಮಿತಿಯ ಒಳಗಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.