ಬೆಂಗಳೂರು: ಸ್ಯಾಂಡಲ್ವುಡ್ ದಾಸ ದರ್ಶನ್ ತೂಗುದೀಪ್ ಹಾಗೂ ಅವರ ಪ್ರೇಯಸಿ ನಟಿ ಪವಿತ್ರಾ ಗೌಡ ರೇಣುಕಸ್ವಾಮಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಎಂಬುದು ಎಲ್ಲರಿಗು ಗೊತ್ತೆ ಇದೆ. ಇವರಿಬ್ಬರು ಸೇರಿದಂತೆ ಕೆಲವು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇಂದು ಡಿಸೆಂಬರ್ 9ರಂದು ಸೋಮವಾರ ಹೈಕೋರ್ಟ್ನಲ್ಲಿ ನಡೆಯಲಿದೆ. ಈ ಬಾರಿಯಾದರೂ ತಮ್ಮ ಆಸೆ ಈಡೇರಲಿ ಎಂದು ದರ್ಶನ್ ಹಾಗೂ ಪವಿತ್ರಾ ಗೌಡ ಚಡಪಡಿಸುತ್ತಿದ್ದಾರೆ.
ರೇಣುಕಸ್ವಾಮಿ ಪ್ರಕರಣದಿಂದ ಜಾಮೀನು ನೀಡುವಂತೆ ರೆಗುಲರ್ ಅರ್ಜಿಯನ್ನು ನಟ ದರ್ಶನ್ ಸಲ್ಲಿಸಿದ್ದರು. ಬಳಿಕ ಅವರು ಅನಾರೋಗ್ಯ ಹೆಸರಿನಲ್ಲಿ ಆರು ವಾರಗಳ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಜೈಲಿಗೆ ಹೋದಾಗಿನಿಂದ ನಟಿ ಪವಿತ್ರಾ ಗೌಡ ಅವರ ಜಾಮೀನು ಸಿಗುವ ಆಸೆ ಹುಸಿಯಾಗುತ್ತಲೇ ಬಂದಿದೆ.
ಪ್ರಕರಣದಲ್ಲಿ ಕೆಲವು ಆರೋಪಿಗಳಿಗೆ ಈಗಾಗಲೇ ಜಾಮೀನು ದೊರಕಿದೆ. ಇನ್ನೂ ಕೆಲವು ಆರೋಪಿಗಳು ಸೇರಿದಂತೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಡಿಸೆಂಬರ್ 6ರಿಂದ ಡಿ.9ಕ್ಕೆ ಹೈಕೋರ್ಟ್ ನ್ಯಾಯಪೀಠ ಮುಂದೂಡಿಕೆ ಆಗಿದೆ. ಇಂದು ಹೈಕೋರ್ಟ್ ಮಹತ್ವದ ನಿರ್ಧಾರ ಪ್ರಕಟಿಸಬಹುದು ಎಂದು ಆರೋಪಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇಂದು ಮಧ್ಯಾಹ್ನ ವಿಚಾರಣೆ ಹೈಕೋರ್ಟ್ ನ್ಯಾಯಾಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿರುವ ಏಕದಸದಸ್ಯ ನ್ಯಾಯಪೀಠದಲ್ಲಿ ಮಧ್ಯಾಹ್ನ 2.30ಕ್ಕೆ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಡಿಸೆಂಬರ್ 3ರಂದು ಡಿ ಬಾಸ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಹಾಗೂ ನಟಿ ಪವಿತ್ರಾ ಗೌಡ ಪರ ಸೆಬಾಸ್ಟಿನ್ ಅವರು ವಾದ ಮಂಡಿಸಿದ್ದರು.
ಬಳಿಕ ಡಿಸೆಂಬರ್ 6ರಂದು ಪೊಲೀಸ್ ತನಿಖಾಧಿಕಾರಿಗಳ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದರು. ಈ ವೇಳೆ ಅವರು, ಬೆನ್ನು ನೋವಿಗೆ ಚಿಕಿತ್ಸೆ ಪಡೆಯದೇ, ಬಿಪಿ ಸರಿಯಿಲ್ಲ ಎಂಬಿತ್ಯಾದಿ ಕಾರಣ ಹೇಳಿ ಸುಮ್ಮನೆ ಕಾಲ ಹರಣ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ನೀಡಿರುವ ಮಧ್ಯಂತರ ಜಾಮೀನು ವಜಗೊಳಿಸುವಂತೆ ಅವರು ಹೈಕೋರ್ಟ್ಗೆ ಮನವಿ ಮಾಡಿದರು.
ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠವು ಜಾಮೀನು ಅರ್ಜಿಗಳ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದರು. ಇಂದು ಆರೋಪಿ ದರ್ಶನ್, ಪವಿತ್ರಾ ಗೌಡ ಜಾಮೀನು ಭವಿಷ್ಯ ಏನಾಗಲಿದೆ ಎಂಬ ಕಾತರ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.