ಬೆಂಗಳೂರು ಟ್ರಾಫಿಕ್ ಕಿರಿಕಿರಿ : ಬ್ರಿಡ್ಜ್ ಮೇಲೇ ಕಾರು ಬಿಟ್ಟು ‘ಪಾದಯಾತ್ರೆ’

ಬೆಂಗಳೂರು ಟ್ರಾಫಿಕ್ ಕಿರಿಕಿರಿ : ಬ್ರಿಡ್ಜ್ ಮೇಲೇ ಕಾರು ಬಿಟ್ಟು 'ಪಾದಯಾತ್ರೆ'

ಬೆಂಗಳೂರು: ಬೆಂಗಳೂರು ಟ್ರಾಫಿಕ್ ಜಾಮ್ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹ ಮಾತ್ರವಲ್ಲದೇ ಟ್ರಾಫಿಕ್ ಜಾಮ್ ಗೂ ತನ್ನ ಕೊಡುಗೆ ನೀಡುತ್ತಿದೆ.

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಸಿಲಿಕಾನ್ ಸಿಟಿಯ ಜನರನ್ನು ಹೈರಾಣಾಗಿಸಿದ್ದು, ಒಂದೆಡೆ ರಸ್ತೆ ಮೇಲೆ ನಿಂತ ನೀರು, ಪ್ರವಾಹ ಜನರನ್ನು ಕಾಡುತ್ತಿದ್ದರೆ ಮತ್ತೊಂದೆಡೆ ಕಿಮೀ ಗಟ್ಟಲೆ ಸಂಚಾರ ದಟ್ಟಣೆ ಸವಾರರ ತಾಳ್ಮೆ ಪರೀಕ್ಷಿಸುತ್ತಿದೆ.

ಅಂತೆಯೇ ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಭಾರಿ ಪ್ರಮಾಣದ ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ಕಿಮೀ ಗಟ್ಟಲೆ ವಾಹನಗಳು ರಸ್ತೆ ಮೇಲೆ ನಿಂತಿದ್ದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.

ಇನ್ನು ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಸಾಮಾನ್ಯವಾಗಿಯೇ ಸಂಚಾರ ದಟ್ಟಣೆ ಇರುತ್ತದೆ. ಅಂತಹುದರಲ್ಲಿ ಮಳೆ ಬಂದರೆ ಇಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಬುಧವಾರ ಸಂಜೆ ಭಾರಿ ಮಳೆ ಸುರಿದ ಹಿನ್ನಲೆಯಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು. ಹೀಗಾಗಿ ಸಂಚಾರ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯ ಒಂದು ಬದಿಯನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇನ್ನು ಈ ಮೇಲ್ಸೇತುವೆ ಮೇಲೆ ಬರೊಬ್ಬರಿ 2 ಗಂಟೆಗಳ ಕಾಲ ಕಾದರೂ ವಾಹನಗಳು ಒಂದಿಂಚೂ ಕದಲಲಿಲ್ಲ. ಹೀಗಾಗಿ ಕ್ಯಾಬ್ ಗಳಲ್ಲಿದ್ದ ಟೆಕ್ಕಿಗಳು ಹಾಗೂ ಇತರೆ ಸವಾರರು ಕ್ಯಾಬ್ ಬಿಟ್ಟು ನಡೆದೇ ಹೋಗಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

ಅಲ್ಲದೆ ಕೆಲ ಟೆಕ್ಕಿಗಳು ತಮ್ಮ ಕರಾಳ ಅನುಭವವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, “ಈ ಪರಿಸ್ಥಿತಿಯಲ್ಲಿ ವೈದ್ಯಕೀಯ ತುರ್ತುಸ್ಥಿತಿ ಇದ್ದರೆ ಬದುಕುಳಿಯುವ ಅವಕಾಶವಿಲ್ಲ. ಮಡಿವಾಳ to ಇಲೆಕ್ಟ್ರಾನಿಕ್ ಸಿಟಿ ನಡುವಿನ ಕೇವಲ 2 ಕಿ.ಮೀ. ಮೇಲ್ಸೇತುವೆಯಲ್ಲಿ ಚಲಿಸಲು ವಾಹನಗಳು 2.30 ಗಂಟೆಗಳ ಕಾಲ ಸಮಯ ಹಿಡಿದಿದೆ ಎಂದು ಸಂಚಾರ ವ್ಯವಸ್ಥೆ ಕುರಿತು ಟೀಕಿಸಿದ್ದಾರೆ.

ಮತ್ತೋರ್ವ ಟೆಕ್ಕಿ, ಎಲೆಕ್ಟ್ರಾನಿಸಿಟಿ ಫ್ಲೈಓವರ್ನಲ್ಲಿ ಕಳೆದ 1.5 ಗಂಟೆಗಳಿಂದ ಸಂಪೂರ್ಣವಾಗಿ ಜಾಮ್ ಆಗಿದೆ. 5:20 ಕ್ಕೆ ಆಫೀಸ್ ನಿಂದ ಲಾಗ್ ಔಟ್ ಆಗಿದ್ದೇವೆ. ಇಷ್ಟು ಹೊತ್ತಿಗಾಗಲೇ ನಾವು 30 ಕಿಮೀ ದೂರದಲ್ಲಿರುವ ನನ್ನ ಮನೆ ತಲುಪಿರಬೇಕಿತ್ತು. ನಾವು ಇನ್ನೂ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೇವೆ! ವಿವಿಧ ಕಂಪನಿಗಳ ಹೆಚ್ಚಿನ ಉದ್ಯೋಗಿಗಳು ಹತಾಶೆಗೊಂಡು ನಡೆದುಕೊಂಡೇ ಹೋಗುತ್ತಿದ್ದಾರೆ ಎಂದು ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.

Leave a Reply

Your email address will not be published. Required fields are marked *