ಬೆಂಗಳೂರು: ಇಬ್ಬರು ಬಾಲಕರ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದ ಆರೋಪಿಗಳ ವಿರುದ್ಧ ನಗರದ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಓರ್ವ ಬಾಲಕನ ತಂದೆ ನೀಡಿದ ದೂರಿನನ್ವಯ ಸೂಫಿಯಾನ್ ಹಾಗೂ ಜುಬೈರ್ ಎಂಬಿಬ್ಬರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಘಟನೆಯ ವಿವರ: ಮಾರ್ಚ್ 17ರ ರಾತ್ರಿ 8:30ರ ಸುಮಾರಿಗೆ ಐವರು ಆರೋಪಿಗಳು ಇಬ್ಬರು ಬಾಲಕರನ್ನು ಗಂಗೊಂಡನಹಳ್ಳಿ ಸಮೀಪ ಕರೆದೊಯ್ದು ದೊಣ್ಣೆಗಳಿಂದ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ಇಬ್ಬರು ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಆರೋಪಿಗಳಿಗೆ ಪರಿಚಯವಿದ್ದ ಬಾಲಕಿಯನ್ನು ರೇಗಿಸಿದ್ದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಬಾಲಕರ ಮೇಲೆ ಹಲ್ಲೆ ಮಾಡಿದ್ದರು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಆರೋಪಿಗಳ ಬಂಧನದ ಬಳಿಕ ಕೃತ್ಯಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.